ಕನ್ನಡಪ್ರಭ ವಾರ್ತೆ, ತುಮಕೂರುಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರ 93 ನೇ ಹುಟ್ಟುಹಬ್ಬವನ್ನು ಭಾನುವಾರ ನಗರದಲ್ಲಿ ಜಿಲ್ಲಾ ಜೆಡಿಎಸ್‌ನಿಂದ ಸಂಭ್ರಮದಿಂದ ಆಚರಿಸಲಾಯಿತು. ಪಕ್ಷದ ಕಚೇರಿಯಲ್ಲಿ ಮುಖಂಡರು ಕೇಕ್ ಕತ್ತರಿಸಿ, ಸಿಹಿ ವಿತರಿಸಿ ಸಡಗರದಿಂದ ತಮ್ಮ ನಾಯಕನ ಜನ್ಮದಿನ ಆಚರಣೆ ಮಾಡಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಹೆಚ್.ನಿಂಗಪ್ಪ, ಹಾಸನ ಜಿಲ್ಲೆ ಹರದನಹಳ್ಳಿಯ ಸಾಮಾನ್ಯ ರೈತನ ಕುಟುಂಬದಲ್ಲಿ ಜನಿಸಿದ ದೇವೇಗೌಡರು ಈ ದೇಶದ ಪ್ರಧಾನ ಮಂತ್ರಿಯಾಗಿ, ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಿ, ಮೊದಲ ಕನ್ನಡಿಗ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಕನ್ನಡಿಗರ ಹೆಮ್ಮೆ ಎಂದು ಹೇಳಿದರು.ತಮ್ಮ ಬದುಕನ್ನೇ ಜನರ ಸೇವೆಗೆ ಮುಡುಪಾಗಿಟ್ಟ ದೇವೇಗೌಡರು ತಮ್ಮಅಧಿಕಾರವಧಿಯಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನೀರಾವರಿ ಹರಿಕಾರರಾಗಿ ಖ್ಯಾತಿ ಗಳಿಸಿ ನಮ್ಮ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ದೀನ ದಲಿತರ, ಅಸಹಾಯಕರ ನೆರವಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಸಲು ಕಾರಣರಾದ ದೇವೇಗೌಡರು, ಈ ವರ್ಗಗಳು ರಾಜಕೀಯ ಅಧಿಕಾರ ಪಡೆಯಲು ಕಾರಣರಾಗಿದ್ದಾರೆ ಎಂದು ಎಚ್.ನಿಂಗಪ್ಪ ಶ್ಲಾಘಿಸಿದರು.ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮತ್ತಿತರರು ಮಾತನಾಡಿ, ದೇವೇಗೌಡರು ನಾಡಿಗೆ ಕೊಟ್ಟ ಕೊಡುಗೆ ಸ್ಮರಿಸಿ, ರಾಜ್ಯದ ನದಿ ನೀರಿನ ವಿಚಾರದಲ್ಲಿ ದೇವೇಗೌಡರ ಸಲಹೆಗಳು ಇಂದಿಗೂ ಸಹ ಪ್ರಸ್ತುತವಾಗಿವೆ ಎಂದರು.
ಒಬಿಸಿ ಘಟಕ ಮಾಜಿ ಜಿಲ್ಲಾಧ್ಯಕ್ಷ ಯೋಗಾನಂದಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಲಕ್ಷ್ಮೀನರಸಿಂಹರಾಜು, ರೈತಘಟಕ ಜಿಲ್ಲಾಧ್ಯಕ್ಷ ರಂಗನಾಥ್, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಎಸ್.ಸಿ.ಘಟಕ ನಗರ ಅಧ್ಯಕ್ಷ ಭೈರೇಶ್, ವಕ್ತಾರ ಮೆಡಿಕಲ್ ಮಧು, ಮುಖಂಡರಾದ ಗಂಗಣ್ಣ, ಮಧು, ದರ್ಶನ್ ಮೊದಲಾದವರು ಭಾಗವಹಿಸಿದ್ದರು.