ಕದ್ರಿ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ಉಸ್ತುವಾರಿ ಸಚಿವ ದಿನೇಶ್‌ ಗೂಂಡೂರಾವ್ ಚಾಲನೆ

KannadaprabhaNewsNetwork | Published : May 18, 2025 11:53 PM
Follow Us

ಸಾರಾಂಶ

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಕದ್ರಿ ಪಾರ್ಕ್‌ನಲ್ಲಿ ‘ಮಾವು ಮೇಳ-2025’ಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಾವು ಮೇಳದಲ್ಲಿ ಸಾವಯವ ಕೃಷಿ ಮಾಡುವ ರೈತರಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಇಲ್ಲಿನ ಕದ್ರಿ ಪಾರ್ಕ್‌ನಲ್ಲಿ ಶುಕ್ರವಾರ ಆರಂಭವಾದ ‘ಮಾವು ಮೇಳ-2025’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಮಾವು ಮೇಳ ಮೇ ೧೮ ರ ವರೆಗೆ ನಡೆಯಲಿದೆ.

ಈ ಮೇಳದಲ್ಲಿ ವಿವಿಧ ತಳಿಯ ಮಾವುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ವಿದೇಶದಲ್ಲಿ ಬೆಳೆಯುವ ಮಾವಿನ ಹಣ್ಣುಗಳನ್ನು ನಮ್ಮ ರೈತರು ಬೆಳೆದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ನೇರವಾಗಿ ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಮನಗರ, ಚೆನ್ನಪಟ್ಟಣ, ಕೋಲಾರ, ಕನಕಪುರ, ಮಾಗಡಿ ಮುಂತಾದ ಸ್ಥಳಗಳಿಂದ ರೈತರು ಬಂದಿದ್ದಾರೆ ಎಂದರು.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಮುಖಂಡ ಪ್ರವೀಣ್ ಚಂದ್ರ ಆಳ್ವ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಇದ್ದರು.

ಕದ್ರಿ ಪಾರ್ಕ್‌ನಲ್ಲಿ ಮಾವಿನ ಘಮ ಘಮ, ‘ಸಿಂದೂರ’ ತಳಿಗೆ ಎಲ್ಲಿಲ್ಲದ ಬೇಡಿಕೆ

ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಈಗ ಮಾವಿನ ಘಮ ಘಮ. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ತೋಟಗಳಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ. ವಿಶೇಷವಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂದೂರ ಹಿನ್ನೆಲೆಯಲ್ಲಿ ‘ಸಿಂದೂರ’ ತಳಿಯ ಮಾವಿನ ಹಣ್ಣಿಗೆ ವಿಶೇಷ ಬೇಡಿಕೆ ಕಂಡು ಬಂದಿದೆ. ಸಿಂದೂರ ಮಾವು ಕಿಲೋಗೆ ೮೦ ರು. ನಲ್ಲಿ ಮಾರಾಟ ಮಾಡಲಾಗುತ್ತಿದೆ.ನ್ಯೂಜಿಲ್ಯಾಂಡ್ ಮೂಲದ ‘ಮಾಯ’, ಥಾಯ್‌ಲ್ಯಾಂಡ್ ಮೂಲದ ‘ಬ್ರೂನಿ ಕಿಂಗ್’, ಆಸ್ಟ್ರೇಲಿಯಾ ಮೂಲದ ‘ಲಿಲಿ’ ಮಾವುಗಳ ಜತೆಗೆ ಬಾದಾಮಿ, ಅಲಾನ್ಸೋ, ಬಂಗನಪಲ್ಲಿ, ಇಮಾಮ್ ಪಸಂದ್, ತೋತಾಪುರಿ, ರುಮಾನಿ, ಮುಂಡಪ್ಪ, ರಸಪೂರಿ, ಮಲ್ಗೋವಾ, ಹಾಮ್ಲೆಟ್, ಸಿಂಧೂರ, ಹನಿ ಡ್ಯೂ, ಕೇಸರ್, ಕಲಪಾಡಿ, ಕೊಂಕಣ್ ರುಚಿ, ಮಲ್ಲಿಕಾ, ಮೀಟಾ ಗೋಲಾ, ಸಾಸಿವೆ (ಸಕ್ಕರೆ ಗುಟ್ಲೆ- ಶುಗರ್ ಬೇಬಿ) ಹೀಗೆ ವೈವಿಧ್ಯಮಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ. ೩೭ ತಳಿಯ ಮಾವಿನ ಹಣ್ಣುಗಳು ವಿವಿಧ ಗಾತ್ರ, ಬಣ್ಣಗಳಲ್ಲಿ ಲಭ್ಯವಿದೆ.ಮಾವಿನ ಹಣ್ಣಿನ ಜತೆಗೆ ರಾಮನಗರದ ಗಮ್‌ಲೆಸ್ ಹಾಗೂ ಸ್ಥಳೀಯ ತಳಿಯ ಹಲಸಿನ ಹಣ್ಣು ಮಾರಾಟಕ್ಕಿವೆ. ಮಾವು ಹಾಗೂ ಹಲಸು ಗಿಡಗಳನ್ನು ಮಾರಾಟಕ್ಕಿಡಲಾಗಿದೆ.

ಥಾಯ್‌ಲ್ಯಾಂಡ್ ಮೂಲದ ತಳಿಯಾದ ಬ್ರೂನಿ ಕಿಂಗ್ ಹಣ್ಣೊಂದು ಒಂದೂವರೆ ಕೆಜಿಯಿಂದ ೨ ಕೆಜಿಯವರೆಗೂ ತೂಕವಿರುತ್ತದೆ. ಇದರ ರುಚಿಯೂ ಉತ್ತಮವಾಗಿದ್ದು, ೧೫ ದಿನಗಳ ಕಾಲ ಕೆಡದಂತೆ ಇಡಬಹುದು. ಕೆಜಿಗೆ ೫೦ ರು.ನಂತೆ ಮಾರಾಟ ಮಾಡಲಾಗುತ್ತಿದೆ. ಮೂರು ವರ್ಷದ ಹಿಂದೆ ಕೋಲ್ಕತ್ತಾದಿಂದ ಬ್ರೂನಿ ಕಿಂಗ್ ಗಿಡಗಳನ್ನು ತಂದು ನೆಟ್ಟಿದ್ದೆ. ಐದು ಗಿಡಗಳಲ್ಲಿ ಈ ಬಾರಿ ಸುಮಾರು ೨೦ರಷ್ಟು ಹಣ್ಣುಗಳು ಬಂದಿವೆ. ನಮ್ಮ ತೋಟದಲ್ಲಿ ೧೨ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಿದ್ದೇನೆ ಎಂದು ರಾಮನಗರದ ಸಿದ್ದರಾಜು ತಿಳಿಸಿದರು.

ಮಾವಿಗೆ ಕಡಿಮೆ ಬೆಲೆ ನಿಗದಿ: ರಾಮನಗರ, ಚನ್ನಪಟ್ಟಣ, ಕೋಲಾರ ಭಾಗದಿಂದ ಮಾವು ಬೆಳೆಯುವ ರೈತರನ್ನು ಮಂಗಳೂರಿಗೆ ಕರೆಸಲಾಗಿದೆ. ಮಿತ ದರದಲ್ಲಿ ಮಂಗಳೂರಿಗರಿಗೆ ವಿವಿಧ ತಳಿಯ ಮಾವಿನ ಹಣ್ಣು ಲಭ್ಯವಾಗುವಂತೆ ಮಾಡಲಾಗಿದೆ. ಅಲ್ಪಾನ್ಸೋ ಮಾವಿನ ಹಣ್ಣಿನ ಮಾರುಕಟ್ಟೆ ದರ ೨೫೦ ರು. ರಾಮನಗರದಿಂದ ಹಣ್ಣು ತಂದಿರುವ ರೈತರು ೨೦೦ ರು. ಬೆಲೆ ನಿಗದಿಪಡಿಸಿದ್ದರು. ಆದರೆ ಮಂಗಳೂರಿನ ಹಣ್ಣು ಪ್ರಿಯರಿಗೆ ನೈಸರ್ಗಿಕವಾಗಿ ಬೆಳೆದು ಹಣ್ಣು ಮಾಡಲಾದ ಮಾವು ಇನ್ನೂ ಕಡಿಮೆ ದರದಲ್ಲಿ ಸಿಗಬೇಕೆಂಬ ನಿಟ್ಟಿನಲ್ಲಿ ರೈತರ ಮನವೊಲಿಸಿ ಈ ಹಣ್ಣಿನ ದರವನ್ನು ೧೮೦ ರು.ಗೆ ನಿಗದಿಪಡಿಸಲಾಗಿದೆ. ಇತರ ತಳಿಯ ಮಾವಿನ ಹಣ್ಣುಗಳನ್ನು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ತಿಳಿಸಿದರು.