ಸರಳತೆ, ಸಜ್ಜನಿಕೆ ಬಿಟ್ಟುಕೊಡದ ಮಾಜಿ ಸ್ಪೀಕರ್ ದಿ.ಕೃಷ್ಣ ಮಂಡ್ಯದ ಗಾಂಧಿ: ಸಿದ್ದರಾಮಯ್ಯ

KannadaprabhaNewsNetwork |  
Published : Jul 26, 2026, 01:45 AM IST
25ಕೆಎಂಎನ್ ಡಿ15 | Kannada Prabha

ಸಾರಾಂಶ

ಕೃಷ್ಣ ಮತ್ತು ನಾನು ಇಬ್ಬರೂ ಏಕಕಾಲಕ್ಕೆ ರಾಜಕೀಯ ಕ್ಷೇತ್ರ ಪ್ರವೇಶಿಸಿದವರು. ಆದರೆ, ಅವರಿಗಿಂತ ಮೊದಲು ನಾನು ಶಾಸಕನಾದೆ. ಕೆ.ಆರ್.ಪೇಟೆ ಮಾಜಿ ಶಾಸಕ ಎಸ್.ಎಂ.ಲಿಂಗಪ್ಪರ ಅನುಯಾಯಿಯಾಗಿದ್ದ ಕೃಷ್ಣ ತಮ್ಮ ಸರಳ ಮತ್ತು ಸಜ್ಜನ ನಡವಳಿಕೆಯಿಂದ ಮಂಡ್ಯದ ಗಾಂಧಿ ಎಂದು ಹೆಸರಾಗಿ ಗಾಂಧೀಜಿಯವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾಜಿ ಸ್ಪೀಕರ್ ದಿ.ಕೃಷ್ಣ ಅವರು ರಾಜಕೀಯ ಕ್ಷೇತ್ರದಲ್ಲಿ ಎಷ್ಟೇ ಉತ್ತುಂಗ ಏರಿದರೂ ತಮ್ಮ ಸರಳತೆ ಮತ್ತು ಸಜ್ಜನಿಕೆಯನ್ನು ಬಿಟ್ಟುಕೊಡದೇ ಮಂಡ್ಯದ ಗಾಂಧಿ ಎಂದು ಹೆಸರಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಪಟ್ಟಣದ ಹೊರವಲಯದ ಜಯಮ್ಮ ರಾಮಸ್ವಾಮಿ ಸಮುದಾಯ ಭವನದಲ್ಲಿ ಮಾಜಿ ಸ್ಪೀಕರ್ ದಿ.ಕೃಷ್ಣರ 86ನೇ ಜನ್ಮದಿನದ ಅಂಗವಾಗಿ ಕೃಷ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕೃಷ್ಣ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷ್ಣ ಮತ್ತು ನಾನು ಇಬ್ಬರೂ ಏಕಕಾಲಕ್ಕೆ ರಾಜಕೀಯ ಕ್ಷೇತ್ರ ಪ್ರವೇಶಿಸಿದವರು. ಆದರೆ, ಅವರಿಗಿಂತ ಮೊದಲು ನಾನು ಶಾಸಕನಾದೆ. ಕೆ.ಆರ್.ಪೇಟೆ ಮಾಜಿ ಶಾಸಕ ಎಸ್.ಎಂ.ಲಿಂಗಪ್ಪರ ಅನುಯಾಯಿಯಾಗಿದ್ದ ಕೃಷ್ಣ ತಮ್ಮ ಸರಳ ಮತ್ತು ಸಜ್ಜನ ನಡವಳಿಕೆಯಿಂದ ಮಂಡ್ಯದ ಗಾಂಧಿ ಎಂದು ಹೆಸರಾಗಿ ಗಾಂಧೀಜಿಯವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು ಎಂದರು.

ಶಾಸಕರಾಗಿ, ಸಚಿವರಾಗಿ, ಸಂಸದರಾಗಿ, ರಾಜ್ಯ ವಿಧಾನಸಭೆ ಸ್ಪೀಕರ್ ಆಗಿ ರಾಜಕೀಯ ಉತ್ತಂಗದಲ್ಲಿದ್ದರೂ ಕೃಷ್ಣ ತಮ್ಮ ಸರಳತೆ ಮತ್ತು ಸಜ್ಜನಿಕೆ ಬಿಟ್ಟುಕೊಟ್ಟವರಲ್ಲ. ಕೃಷ್ಣ ಅವರು ಬದುಕಿರುವವರೆಗೂ ನಾನು ಕೃಷ್ಣ ಅವರೊಂದಿಗೆ ರಾಜಕೀಯ ವಿಚಾರಗಳ ಚರ್ಚೆ ಮಾಡುತ್ತಿದೆ. ಬೆಂಗಳೂರಿನಲ್ಲಿದ್ದಾಗಲೆಲ್ಲಾ ಕೃಷ್ಣ ಅವರು ನನ್ನನ್ನು ನೋಡದೆ ಎಂದಿಗೂ ಹೋಗುತ್ತಿರಲಿಲ್ಲ. ಅಷ್ಟೋಂದು ಆತ್ಮೀಯತೆ ಕೃಷ್ಣ ಮತ್ತು ನನ್ನ ನಡುವೆಯಿತ್ತು ಎಂದರು.

ಜಿ.ಮಾದೇಗೌಡರನ್ನು ಸೋಲಿಸಿದ ಹೆಗ್ಗಳಿಕೆ:

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಜಿ.ಮಾದೇಗೌಡ ಬಹುದೊಡ್ಡ ಶಕ್ತಿ. ಮಾದೇಗೌಡರನ್ನು ಸೋಲಿಸಿ ಸಂಸದ ಆಯ್ಕೆಯಾದ ಹೆಗ್ಗಳಿಕೆ ಕೆ.ಆರ್.ಪೇಟೆ ಕೃಷ್ಣರಿಗೆ ಇದೆ. ಅವರ ವಿರುದ್ಧ ಸ್ಪರ್ಧಿಸಲು ಜಿಲ್ಲೆಯಲ್ಲಿ ಯಾರೂ ತಯಾರಿರಲ್ಲಿಲ್ಲ. ಅಂತ ಪರಿಸ್ಥಿತಿಯಲ್ಲಿ ನಾನು ಮತ್ತು ಎಚ್.ಡಿ.ದೇವೇಗೌಡರು ಚರ್ಚಿಸಿ ಅಂದು ಶಾಸಕರಾಗಿದ್ದ ಕೃಷ್ಣರ ರಾಜೀನಾಮೆ ಕೊಡಿಸಿ ಮಂಡ್ಯ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿ ಜಿ.ಮಾದೇಗೌಡರ ವಿರುದ್ಧ ಗೆಲ್ಲಿಸಿಕೊಂಡು ಬರಲಾಗಿತ್ತು ಎಂದರು.

ಕೃಷ್ಣರ ಗೆಲುವಿಗೆ ಅವರ ಸರಳತೆಯೇ ಕಾರಣ. ಕಲುಷಿತ ರಾಜಕಾರಣದ ಬಗ್ಗೆ ತಮ್ಮ ರಾಜಕೀಯದ ಕೊನೆಯ ದಿನಗಳಲ್ಲಿ ಕೃಷ್ಣ ತೀವ್ರ ಬೇಸರಕ್ಕೆ ಒಳಗಾಗಿದ್ದರು. ಕೃಷ್ಣರ ನೆನಪಿನಲ್ಲಿ ಪ್ರತಿಷ್ಠಾನದಿಂದ ಗಾಂಧಿ ಭವನ ನಿರ್ಮಿಸಿದರೆ ಇದಕ್ಕೆ ಅಗತ್ಯ ಸಹಕಾರವನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜಕಾರಣಿಯಾಗಿ ಕೃಷ್ಣ ಅವರು ಶೇ.80ರಷ್ಟು ಮೌಲ್ಯಧಾರಿತ ರಾಜಕಾರಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಕೃಷ್ಣ ಮತ್ತು ಸಿದ್ದರಾಮಯ್ಯ ಜೊತೆ ಜೊತೆಯಾಗಿ ರಾಜಕಾರಣ ಮಾಡಿದವರು. ಅನಿವಾರ್ಯ ಕಾರಣಗಳಿಂದ ಕೃಷ್ಣ ಅವರು ಸಿದ್ದರಾಮಯ್ಯ ಅವರನ್ನು ಬಿಟ್ಟು ರಾಜಕಾರಣ ಮಾಡಬೇಕಾಯಿತು ಎಂದರು.

ಇಂದಿನ ಕಲುಷಿತ ರಾಜಕೀಯದ ನಡುವೆಯೂ ಸಿದ್ದರಾಮಯ್ಯ ಮೌಲ್ಯಾಧಾರಿತ ಮತ್ತು ಜಾತ್ಯತೀತ ರಾಜಕಾರಣ ಮಾಡಿದವರು. ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಅವರ ರಾಜಕೀಯ ಹೆಜ್ಜೆಗಳನ್ನು ಒಳಹೊಕ್ಕು ನೋಡಬೇಕು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಹಕರಿಸಿ ರಾಜಕೀಯ ಆದರ್ಶ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಮನೆ ಅಂಕೇಗೌಡ, ಬಿ.ಆರ್.ರಾಮೇಗೌಡ, ಹೈನುಗಾರಿಕೆ ಮೂಲಕ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ರೈತ ಮಹಿಳೆ ಹೆಮ್ಮನಹಳ್ಳಿ ಪವಿತ್ರ ಹಾಗೂ ಕಳೆದ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಡಾ.ಮುತ್ತೇಶ್ ಗೌಡ ಅವರ ತಂದೆ ತಾಯಿಯನ್ನು ಶಾಸಕ ಎಚ್.ಟಿ.ಮಂಜು ಕೃಷ್ಣ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಮನ್ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ.ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್, ಕೈಗಾರಿಕಾ ಮಾರಾಟ ಮಹಾಮಂಡಳಿ ಅಧ್ಯಕ್ಷ ಬಸ್ ಸಂತೋಷ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಐಚನಹಳ್ಳಿ ಶಿವಣ್ಣ, ಕೋಟೆ ಭೈರವೇಶ್ವರ ಸಹಕಾರ ಸಂಘದ ಅಧ್ಯಕ್ಷೆ ಮಂಜುಳ ಚೆನ್ನಕೇಶವ, ತಾಲೂಕಿನ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕೃಷ್ಣ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸ್ಪೀಕರ್ ದಿ.ಕೃಷ್ಣರ ಧರ್ಮಪತ್ನಿ ಪ್ರೋ.ಇಂದಿರಮ್ಮ, ಮಾಜಿ ಶಾಸಕ ಬಿ.ಪ್ರಕಾಶ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ಎಂ.ಡಿ.ಕೃಷ್ಣಮೂರ್ತಿ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಎಸಿ ಕೆ.ಆರ್.ಶ್ರೀನಿವಾಸ್, ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಬೂಕನಕೆರೆ ಜವರಾಯಿಗೌಡ, ಸಂತೇಬಾಚಹಳ್ಳಿ ನಾಗರಾಜು, ಐಚನಹಳ್ಳಿ ಶಿವಣ್ಣ, ಹಾದನೂರು ಪರಮೇಶ್, ಆರ್.ಎಸ್.ಶಿವರಾಮೇಗೌಡ, ಕೆ.ಎಂ.ವಾಸು, ಎಚ್.ಜೆ.ರಮೇಶ್, ಎ.ಎಸ್.ಮಂಜುನಾಥ್, ಎಂ.ಬಿ.ಹರೀಶ್, ಎ.ಎನ್.ಜಯರಾಮು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗತ್ತಿನ ಸಾಂಸ್ಕೃತಿಕ ನಾಯಕ ಬಸವಣ್ಣ: ಸುತ್ತೂರು ಶ್ರೀ ಬಣ್ಣನೆ
ನೀಟ್‌ ಪ್ರಕರಣ: ಹೊಸ ಫ್ಲೆಕ್ಸ್ ಮೂಲಕ ಬಿಜೆಪಿಗೆ ಕೈ ನಾಯಕರ ಕೌಂಟರ್‌