ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಚನ್ನನಕೆರೆ ಗ್ರಾಮದ ಬಳಿಯ ಸರ್ವೇ ನಂ78 ರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಮಳವಳ್ಳಿ ಭಾಗಕ್ಕೆ ನೀರುಣಿಸುವ ವಿ.ಸಿ.ಸಂಪರ್ಕ ನಾಲೆ ಸುರಂಗ ಮಾರ್ಗ ಹಾದು ಹೋಗಿದೆ. ಈ ಸೂಕ್ಷ್ಮ ಸ್ಥಳದ ಬಳಿಯೇ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಹೋರಾಟಗಾರು ದೂರು ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ದಸಂಸ ಸಂಚಾಲಕ ಗಂಜಾಂ ರವಿಚಂದ್ರ ಮಾತನಾಡಿ, ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿವೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ರಾಜಧನ ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ.ನಂತರ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾತನಾಡಿ, ತಾಲೂಕಿನಾದ್ಯಂತ ಎಲ್ಲೆಡೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಅಲ್ಲದೇ, ಮಳವಳ್ಳಿ ಭಾಗದ ಲಕ್ಷಾಂತರ ಎಕರೆಗೆ ನೂರುಣಿಸುವ ವಿ.ಸಿ.ಸಂಪರ್ಕ ನಾಲೆ ಸುರಂಗ ಮಾರ್ಗದ ಬಳಿಯೇ ದೊಡ್ಡ ಮಟ್ಟದಲ್ಲಿ ಭೂಮಿಯನ್ನು ಕೊರೆದು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ.