ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ 108 ಅರ್ಚಕರಿಂದ ಕುಂಭಾಭಿಷೇಕ, ಪೂಜಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ 108 ಅರ್ಚಕರಿಂದ ಕುಂಭಾಭಿಷೇಕ, ಪೂಜಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ಬೆನಕನ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದ ಕೊನೆಯ ದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಈ ಪೂಜೆಯಲ್ಲಿ 108 ಕಳಸಗಳಿಂದ ಗಂಗಾಜಲವನ್ನು ತರಲು ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಬೇಡಗಂಪಣ ಅರ್ಚಕರ ತಂಡ ಮಜ್ಜನ ಬಾವಿಯಿಂದ ಮಡಿವಂತಿಕೆಯಿಂದ ಗಂಗಾಜಲವನ್ನು ಕಳಸಗಳಲ್ಲಿ ತಂದು ಮಲೆ ಮಾದೇಶ್ವರನಿಗೆ ಕುಂಭಾಭಿಷೇಕ ನೆರವೇರಿಸಿದರು.

ಬೆಳಗಿನ ಜಾವ ಎಣ್ಣೆ ಮಜ್ಜನ ಸೇವೆ, ದೂಪದ ಸೇವೆ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಸೇವೆಗಳು ನಡೆದವು.

ವಿಶೇಷ ಉತ್ಸವಗಳು:

ಬೆನಕನ ಅಮಾವಾಸ್ಯೆ ಅಂಗವಾಗಿ ರುದ್ರಾಕ್ಷಿ ಮಂಟಪೋತ್ಸವ, ಬಸವ ವಾಹನೋತ್ಸವ, ಹುಲಿವಾಹನೋತ್ಸವ, ಬೆಳ್ಳಿ ರಥೋತ್ಸವ ಸೇರಿದಂತೆ ಹರಕೆ ಹೊತ್ತ ಭಕ್ತರ ವಿವಿಧ ಉತ್ಸವಗಳು ನಡೆದವು.

ಭಕ್ತ ಸಾಗರ:

ರಾಜ್ಯದ ನಾನಾ ಭಾಗಗಳು, ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಮಾದಪ್ಪನ ಭಕ್ತರು ಬೆಟ್ಟಕ್ಕೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೂಪ ಹಾಕಿ, ಪಂಜಿನ ಸೇವೆ ನಡೆಸಿ, ಮಾದೇಶ್ವರನ ದರ್ಶನ ಪಡೆದು ಪುನೀತರಾದರು. ಈ ದೃಶ್ಯ ಕಣ್ತುಂಬಿಕೊಳ್ಳುವಂತಿತ್ತು.

ಸಕಲ ಸಿದ್ಧತೆ:

ಭಕ್ತರ ಅನುಕೂಲಕ್ಕಾಗಿ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ, ಲಾಡು ಪ್ರಸಾದ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿತ್ತು. ಯಾವುದೇ ಲೋಪದೋಷವಾಗದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನೇಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.

ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕರವೀರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್, ಉಪ ಕಾರ್ಯದರ್ಶಿ ಚಂದ್ರಶೇಖರ್, ಪಾರು ಪತ್ತೆದಾರರಾದ ಮಹದೇವಸ್ವಾಮಿ ಹಿರಿಯ ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ, ಅರ್ಚಕರ ತಂಡ ಹಾಗೂ ವಾದ್ಯ ವಾದ್ಯ ಮೇಳ ಇದ್ದವು.