ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಾತ್ರಿ 8.30ರಿಂದ ರಕ್ಷಣಾ ಕಾರ್ಯ ಆರಂಭಿಸಿ ನಡುಗಡ್ಡೆಯೊಳಗೆ ಸಿಲುಕಿದ್ದ ಹಸುಗಳನ್ನು ಸ್ಥಳೀಯರ ಸಹಕಾರ ಪಡೆದು ಹಗ್ಗಗಳಿಂದ ಕಟ್ಟಿ ಬೋಟಿನ ಸಹಾಯದ ಮೂಲಕ ಒಂದೊಂದೇ ಹಸುಗಳನ್ನು ಗಾಬರಿಗೊಳಿಸದಂತೆ ಅತ್ಯಂತ ಸುರಕ್ಷಿತವಾಗಿ ಗಂಜಾಂನ ತೀರಕ್ಕೆ ಕರೆತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಾವೇರಿ ನದಿ ನೀರು ಹೆಚ್ಚಳವಾದ ಹಿನ್ನೆಲೆ ನಡುಗಡ್ಡೆಯ ಪ್ರವಾಹದಲ್ಲಿ ಸಿಲುಕಿದ್ದ 6 ರಾಸುಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಗಂಜಾಂನ ಖುರಾದ್ ಬೀದಿಯ ನಿವಾಸಿ ಶಿವರಾಜು ಅವರು ಪಟ್ಟಣ ಹೊರವಲಯದ ಗಂಜಾಂನ ಚಂದಗಾಲು ರಸ್ತೆಯ ಗುಂಚಿ ಬಳಿ ಇರುವ ಕಾವೇರಿ ನದಿ ನಡುಗಡ್ಡೆಯಲ್ಲಿ ತಮ್ಮ 5 ರಾಸು ಹಾಗೂ 1 ಕರುವನ್ನು ಬೆಳಗ್ಗೆ ಮೇಯಲು ಬಿಟ್ಟಿದ್ದಾರೆ. ಜಲಾಶಯದಿಂದ ಹೊರಹರಿವು ಸಂಜೆ ವೇಳೆಗೆ ಏಕಾಏಕಿ ಹೆಚ್ಚಳಗೊಂಡ ಪರಿಣಾಮ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದವು.

ಇದರಿಂದ ಆತಂಕಗೊಂಡ ರಾಸುಗಳ ಮಾಲೀಕ ಶಿವರಾಜು ತಮ್ಮ ಸ್ನೇಹಿತರ ಸಹಾಯದಿಂದ ರಾಸುಗಳನ್ನು ಹೊರತರಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದ ಕಾರಣ ಅಗ್ನಿಶಾಮಕ ಠಾಣೆಗೆ ದೂರು ಕೊಟ್ಟು ಮಾಹಿತಿ ನೀಡಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಾತ್ರಿ 8.30ರಿಂದ ರಕ್ಷಣಾ ಕಾರ್ಯ ಆರಂಭಿಸಿ ನಡುಗಡ್ಡೆಯೊಳಗೆ ಸಿಲುಕಿದ್ದ ಹಸುಗಳನ್ನು ಸ್ಥಳೀಯರ ಸಹಕಾರ ಪಡೆದು ಹಗ್ಗಗಳಿಂದ ಕಟ್ಟಿ ಬೋಟಿನ ಸಹಾಯದ ಮೂಲಕ ಒಂದೊಂದೇ ಹಸುಗಳನ್ನು ಗಾಬರಿಗೊಳಿಸದಂತೆ ಅತ್ಯಂತ ಸುರಕ್ಷಿತವಾಗಿ ಗಂಜಾಂನ ತೀರಕ್ಕೆ ಕರೆತಂದಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್ ನೇತೃತ್ವದಲ್ಲಿ ಪ್ರಮುಖ ಅನಂತು, ತೇಜೋಮೂರ್ತಿ ಹಾಗೂ ವೆಂಕಟೇಶ್, ವಾಹನ ಚಾಲಕರುಗಳಾದ ಬಸವರಾಜು ಅಂಗಡಿ ಹಾಗೂ ಶ್ರೀಶೈಲ ಕುರಿ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.