ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿ ಸಿ.ಡಿ.ಸತ್ಯನಾರಾಯಣಗೌಡ (86) ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬವನ್ನು ಅಗಲಿದ್ದಾರೆ.
ಸುಮಾರು 5 ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದ ಸತ್ಯನಾರಾಯಣಗೌಡರು, ಅಪ್ಪಟ ಕಾಂಗ್ರೆಸ್ಸಿಗನಾಗಿಯೇ ಖ್ಯಾತಿ ಪಡೆದಿದ್ದರು. ಬದಲಾದ ರಾಜಕಾರಣದ ವಿವಿಧ ಕಾಲಘಟ್ಟಗಳಲ್ಲಿ ಅವರು ಕೆಲಕಾಲ ಜೆಡಿಎಸ್, ಬಿಜೆಪಿಯಲ್ಲಿದ್ದರೂ ಬಳಿಕ ಕಾಂಗ್ರೆಸ್‌ನಲ್ಲೇ ತಮ್ಮ ನೆಲೆ ಭದ್ರಪಡಿಸಿಕೊಂಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರು ಸೋಲನ್ನು ಅನುಭವಿಸಿದ್ದರು.ಒಂದು ಹಂತದಲ್ಲಿ ಜಾಲಪ್ಪ ಅವರ ರಾಜಕೀಯ ವಿರೋಧಿಯಾಗಿ, ಬಳಿಕ ಜಾಲಪ್ಪ, ಆರ್.ಜಿ.ವೆಂಕಟಾಚಲಯ್ಯ, ಜೆ.ನರಸಿಂಹಸ್ವಾಮಿ ಅವರ ಆಪ್ತರಾಗಿ ತಾಲೂಕಿನ ರಾಜಕಾರಣದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.
ಸಹಕಾರ ಕ್ಷೇತ್ರದಲ್ಲೂ ತಮ್ಮ ಹೆಜ್ಜೆಗುರುತುಗಳನ್ನು ಹೊಂದಿದ್ದ ಅವರು, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ತಾಲೂಕಿನ ಸುಪ್ರಸಿದ್ಧ ಕನಸವಾಡಿ ಚಿಕ್ಕಮಧುರೆ ಶನೇಶ್ವರ ಸ್ವಾಮಿ ದೇವಾಲಯದ ಟ್ರಸ್ಟಿನ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರು ವಿವಿಧ ಸಂಘಟನೆಗಳ ಪ್ರೋತ್ಸಾಹಕರೂ ಆಗಿದ್ದರು.ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಸಂಜೆ ಸತ್ಯನಾರಾಯಣಗೌಡರ ಸ್ವಗ್ರಾಮ ಚನ್ನಾದೇವಿ ಅಗ್ರಹಾರ ಬಳಿಯ ಅವರ ತೋಟದಲ್ಲಿ ನೆರವೇರಿತು.
ಸಂತಾಪ: ಸಿ.ಡಿ.ಸತ್ಯನಾರಾಯಣಗೌಡ ಅವರ ನಿಧನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್, ಮಧುರೆ ಹೋಬಳಿಯ ವಿವಿಧ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.