- ಸೊರಟೂರು ಸರ್ಕಾರಿ ಪ್ರೌಢಶಾಲೆ ಕಾರ್ಯಕ್ರಮದಲ್ಲಿ ನ್ಯಾ.ಪುಣ್ಯಕೋಟಿ ಸಲಹೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಾನವ ಕಳ್ಳ ಸಾಗಣೆಯಂಥ ಸಾಮಾಜಿಕ ಪಿಡುಗಿಗೆ ಮುಖ್ಯವಾಗಿ ಬಡತನ, ಅನಕ್ಷರತೆ, ನಿರುದ್ಯೋಗ ಹಾಗೂ ಧನದಾಹಿ ಮನೋಭಾವನೆಗಳು ಪ್ರಮುಖ ಕಾರಣಗಳಾಗಿವೆ. ಈ ಹಿನ್ನೆಲೆ ಸಾರ್ವಜನಿಕರಲ್ಲಿ ಯುವಜನರು ಜನಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎನ್. ಪುಣ್ಯಕೋಟಿ ಹೇಳಿದರು.ತಾಲೂಕಿನ ಸೊರಟೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳಸಾಗಣೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಿಲುಕಿರುವವರ ಕನಸಿನ ಬದುಕು ಛಿದ್ರವಾಗಿದೆ. ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆಗೂ ಒಳಗಾಗುತ್ತಿರುವುದರಿಂದ ಈ ಬಗ್ಗೆ ಯುವಕರಲ್ಲಿ ಜಾಗೃತಿ ಅತ್ಯಗತ್ಯ. ಯುವಜನರಲ್ಲಿ ನಿರುದ್ಯೋಗ, ಅನಕ್ಷರತೆ ಹಾಗೂ ದುರುದ್ದೇಶದ ಕಾರಣದಿಂದ ಮಾನವ ಕಳ್ಳಸಾಗಣಿಕೆ ಕೃತ್ಯಗಳು ನಿರಂತರ ನಡೆಯುತ್ತಿವೆ. ಇದರ ತಡೆಗೆ ಎಲ್ಲರೂ ಹೋರಾಟ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನಮ್ಮ ರಕ್ತಸಂಬಂಧಿಗಳೇ ಈ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇಂಥವುಗಳ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ವಿಷಯ ತಿಳಿಸಬೇಕು. ಇಲಾಖೆಯೂ ಸಹ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡುತ್ತದೆ, ಆ ಬಗ್ಗೆ ಭಯ ಬೇಡ ಎಂದು ನ್ಯಾಯಾಧೀಶರು ತಿಳಿಸಿದರು.ಸಹಾಯಕ ಸರ್ಕಾರಿ ಅಭಿಯೋಜಕ ಭರತ್ ಭೀಮಯ್ಯ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಾನವ ಕಳ್ಳ ಸಾಗಣೆ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಅಲ್ಲಿಯ ಜನರಲ್ಲಿನ ಅನಕ್ಷರತೆ. ಈ ಬಗ್ಗೆ ಜಾಗೃತಿ ಕೊರತೆಯೂ ಮುಖ್ಯ ಕಾರಣವಾಗಿದೆ. ಹಾಗಾಗಿ, ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಮಾನವ ಕಳ್ಳ ಸಾಗಣೆ ತಡೆಗಟ್ಟುವ ಬಗ್ಗೆ ಶಾಲಾ- ಕಾಲೇಜುಗಳಲ್ಲಿ ಯುವಕರ ಪ್ರಮುಖ ಸಂಘಟನೆಗಳಲ್ಲಿ ಜಾಗೃತಿ ಮೂಡಬೇಕು. ಹಾಗಾದಲ್ಲಿ ಖಂಡಿತ ಮಾನವ ಕಳ್ಳ ಸಾಗಣೆ ಕೃತ್ಯಗಳು ನಿಯಂತ್ರಣಕ್ಕೆ ಬರುತ್ತವೆ ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಯಪ್ಪ ಮಾತನಾಡಿದರು. ವಕೀಲರ ಸಂಘದ ಪ್ರಮುಖರಾದ ಪುರುಷೋತ್ತಮ್ಮ, ಬಿ.ಉಮೇಶ್, ಎಂ.ಗುಡ್ಡಪ್ಪ, ನ್ಯಾಯಾಲಯದ ಸಿಬ್ಬಂದಿ ಸಂತೋಷ್, ಶಾಲೆ ಮುಖ್ಯೋಪಾಧ್ಯಾಯ ಅಶೋಕ್, ಶಿಕ್ಷಕರಾದ ಚಂದ್ರಪ್ಪ, ಶ್ರೀಧರ್ ವನಜಾಕ್ಷಮ್ಮ, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.- - -
ಬಾಕ್ಸ್ * ಅಕ್ರಮಗಳ ತಡೆಯೋದು ಎಲ್ಲರ ಜವಾಬ್ದಾರಿಮಾನವ ಕಳ್ಳತನ ಕೃತ್ಯಗಳ ಹಿಂದೆ ದೊಡ್ಡ ಜಾಲವೇ ಇರುತ್ತದೆ. ಇವರೆಲ್ಲರೂ ನಮ್ಮ ಮಧ್ಯೆಯೇ ಇರುತ್ತಾರೆ. ನಮ್ಮ ಬಗ್ಗೆ ಗೌರವ, ಆದರಗಳಿಂದ ಕಾಣುತ್ತ, ನಮ್ಮ ಸ್ನೇಹವನ್ನು ಸಂಪಾದಿಸುತ್ತಾರೆ. ಅನಂತರ ಈ ಜಾಲಕ್ಕೆ ನಮ್ಮನ್ನು ಸಿಲುಕಿಸುತ್ತಾರೆ. ಕೇವಲ ಹಣ ಮಾಡುವ ದುರುದ್ದೇಶದಿಂದ ಮಾನವರನ್ನು ಅಪಹರಿಸಿ, ಅವರ ಅಂಗಾಂಗಳನ್ನು ತೆಗೆದು ಇತರರಿಗೆ ಮಾರಾಟ ಮಾಡಿಸಿ ಕಸಿ ಮಾಡುತ್ತಾರೆ. ಇದರಿಂದ ಇನ್ನೊಬ್ಬರ ಪ್ರಾಣಹರಣ ಆಗುತ್ತದೆ. ಈ ಅಮಾನವೀಯತೆ, ಅಕ್ರಮಗಳನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನ್ಯಾಯಾಧೀಶ ಎಸ್.ಎನ್. ಪುಣ್ಯಕೋಟಿ ಹೇಳಿದರು.- - - -ಹೊನ್ನಾಳಿ ಎಚ್.ಎಲ್.ಐ1:
ಹೊನ್ನಾಳಿ ತಾಲೂಕಿನ ಸೊರಟೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಾನವ ಕಳ್ಳಸಾಗಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎಸ್.ಎನ್. ಪುಣ್ಯಕೋಟಿ ಮಾತನಾಡಿದರು. ಎಪಿಪಿ ಭರತ್ ಭೀಮಯ್ಯ, ವಕೀಲರ ಸಂಘ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.