ನೀರು ಸಂಗ್ರಹಣಕ್ಕೆ ಕ್ರಿಯಾ ಯೋಜನೆ ರೂಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್

KannadaprabhaNewsNetwork |  
Published : May 18, 2024, 12:30 AM IST
ಫೋಟೋ- ಡಿಸಿ ಕಲಬುರಗಿ 1ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರಗಾಲ ನಿರ್ವಹಣೆ ಮತ್ತು ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಸಿದ್ಧತೆ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸಿಡಿಲಿನಿಂದ ರಕ್ಷಣೆ ಕುರಿತ ಪ್ರಚಾರ ಪೋಸ್ಟರ್ ಗಳನ್ನು ಡಿ.ಸಿ. ಬಿ.ಫೌಜಿಯಾ ತರನ್ಜುಮ್ ಆದಿಯಾಗಿ ಹಿರಿಯ ಅಧಿಕಾರಿಗಳು ಬಿಡುಗೊಡೆಗೊಳಿಸಿದರು. | Kannada Prabha

ಸಾರಾಂಶ

ಮೇ ಮಾಹೆಯಲ್ಲಿ ಇದೂವರೆಗೆ ಉತ್ತಮ ಮಳೆಯಾಗಿದ್ದು, ವಾಡಿಕೆಗ್ಗಿಂತ ಶೇ.143 ಮಿ.ಮೀ ಹೆಚ್ಚುವರಿ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ ವರ್ಷ ಕಲಬುರಗಿ ಜಿಲ್ಲೆ ಕೆಟ್ಟ ಬರಗಾಲಕ್ಕೆ ಸಾಕ್ಷಿಯಾಗಿದ್ದು, ಈ ವರ್ಷ ಉತ್ತಮ ಮಳೆ ಮುನ್ಸೂಚನೆ ಇರುವ ಕಾರಣ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ಹೂಳು ತೆಗೆದು ಉತ್ತಮ ನೀರು ಸಂಗ್ರಹಣೆಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರಗಾಲ ನಿರ್ವಹಣೆ ಮತ್ತು ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಸಿದ್ಧತೆ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡುತ್ತಾ, ಕೆರೆಗಳ ಇನಲೆಟ್ ಔಟಲೆಟ್ ಪ್ರದೇಶದಲ್ಲಿಯೂ ಹೂಳು ಸಂಗ್ರವಾಗಿದಲ್ಲಿ ಅದನ್ನು ಸಹ ತೆಗೆಯಬೇಕು. ಸಣ್ಣ ಪುಟ್ಟ ದುರಸ್ತಿ, ಬಂಡ್ ನಿರ್ಮಾಣ ಕಾಮಗಾರಿಗಳು ಇಲಾಖಾ ಅನುದಾನದಲ್ಲಿಯೇ ಕೂಡಲೆ ಮಾಡಬೇಕು. ಇದೇ ರೀತಿಯಲ್ಲಿ ನಗರ-ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಇದರ ಜವಾಬ್ದಾರಿ ವಹಿಸಬೇಕು ಎಂದು ಡಿ.ಸಿ. ಸೂಚಿಸಿದರು.

ಮಳೆ ನೀರು ಸರಿಯಾಗಿ ಹರಿದು ಹೋಗದಿರುವುದಕ್ಕೆ ಚರಂಡಿ ಬ್ಲಾಕೇಜ್‍ಗಳೆ ಮುಖ್ಯ ಕಾರಣ. ಮಳೆ ಬರುವ ಮುನ್ನವೆ ಇದನ್ನು ಸರಿಪಡಿಸಿದಲ್ಲಿ ಮನೆಗೆ ನೀರು ನುಗ್ಗುವುದು, ರಸ್ತೆ ಮೇಲೆ ನೀರು ಸಂಗ್ರವಾಗುವುದನ್ನು ತಪ್ಪಿಸಬಹುದಾಗಿದೆ. ಓ.ಎಚ್.ಟಿ. ಟ್ಯಾಂಕ್ ಸ್ವಚ್ಛಗೊಳಿಸಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶದ ರಸ್ತೆ ಬದಿಯಲ್ಲಿ ಮರಗಳ ರೆಂಬೆಗಳು ಹೆಚ್ಚಾಗಿ ಬೆಳೆದಿದ್ದಲ್ಲಿ ಅದನ್ನು ಕತ್ತರಿಸಬೇಕು. ರಸ್ತೆ, ಸೇತುವೆ ಸಣ್ಣ ಪುಟ್ಟ ದುರಸ್ತಿಯನ್ನು ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯಿಂದ ಸರಿಪಡಿಸಿಬೇಕು. ಮಳೆ ಬಂದ ನಂತರ ಸಾಂಕ್ರಾಮಿಕ ರೋಗ ಉಲ್ಭಣವಾಗುವುದರಿಂದ ಇದರ ಬಗ್ಗೆ ಈಗಲೆ ಆರೋಗ್ಯ ಇಲಾಖೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ಜೆಸ್ಕಾಂ 24 ಗಂಟೆ ಕಾರ್ಯನಿರ್ವಹಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಮೇ ಮಾಹೆಯಲ್ಲಿ ಇದೂವರೆಗೆ ಉತ್ತಮ ಮಳೆಯಾಗಿದ್ದು, ವಾಡಿಕೆಗ್ಗಿಂತ ಶೇ.143 ಮಿ.ಮೀ ಹೆಚ್ಚುವರಿ ಮಳೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 8.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ವಿಶೇಷವಾಗಿ ತೊಗರಿ 6 ಲಕ್ಷ, ಗ್ರೀನ್ ಗ್ರಾಮ್, ಬ್ಲ್ಯಾಕ್ ಗ್ರಾಮ್ ತಲಾ 75 ಸಾವಿರ, ಕಬ್ಬು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. 19,461 ಕ್ವಿಂಟಲ್‌ ಬಿತ್ತನೆ ಬೀಜ ಲಭ್ಯವಿದ್ದು, ಜಿಲ್ಲೆಯಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.

ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 4,53,088 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದನ್ನು ಮುಂದಿನ 21 ವಾರದ ವರಗೆ ಬಳಸಬಹುದಾಗಿದೆ. ಸದ್ಯ ಮೇವಿನ ಕೊರತೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ ನೊಂದಾಯಿತ ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಜಾನುವಾರುಗಳೀಗೆ ನೀರು, ಮೇವು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿರುವ ಬಗ್ಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಡಿ.ಸಿ. ಸೂಚನೆ ನೀಡಿದರು.

ಸಿಡಿಲು ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ:

ವಿಶೇಷವಾಗಿ ಮಳೆಗಾಲದಲ್ಲಿ ಭೀಕರ ಮಳೆ, ಸಿಡಿಲು ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆ, ಆರೋಗ್ಯ ಇಲಾಖೆ ಹೆಚ್ಚು ಜನಜಾಗೃತಿ ಮೂಡಿಸಬೇಕು. ಐ.ಇ.ಸಿ ಚಟುವಟಿಕೆ ತೀವ್ರಗೊಳಿಸಬೇಕು. ಸಿಡಿಲಿನಿಂದ ರಕ್ಷಣೆ ಪಡೆಯುವುದು ಹೇಗೆ? ಏನು ಮಾಡಬೇಕು, ಏನು ಮಾಡಬಾರದೆಂಬ ವಿವರವುಳ್ಳ ಪ್ರಚಾರದ ಪೋಸ್ಟರ್‌ಗಳಿದ್ದು, ಇದನ್ನು ಗ್ರಾಮ-ಪಟ್ಟಣದ ಪ್ರಮುಖ ಬೀದಿ, ಸ್ಥಳದಲ್ಲಿ ಅಂಟಿಸಬೇಕು. ಹಳ್ಳಿಗಳಿಗೆ ಹೋಗಿ ಜನರಿಗೆ ತಿಳುವಳಿಕೆ ನೀಡಬೇಕು. ಇದೇ ರೀತಿಯಲ್ಲಿ ಪ್ರತಿ ಶಾಲೆ, ವಸತಿ ನಿಲಯ, ಅಂಗನವಾಡಿಯಲ್ಲಿಯೂ ಸಹ ಇದರ ಬಗ್ಗೆ ಮಾಹಿತಿ ನೀಡುವ ಮೂಲಕ ಒಟ್ಟಾರೆ ಸಿಡಿಲಿನಿಂದ ಮಾನವ-ಪ್ರಾಣಿ ಹಾನಿ ತಡೆಗಟ್ಟಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ರೂಪಿಂದರ್ ಸಿಂಗ್ ಕೌರ್, ಆಶಪ್ಪ ಪೂಜಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ತಾಲೂಕು ಪಂಚಾಯ್ತಿ ಇ.ಓ ಗಳು ಇದ್ದರು.ಸಂಭಾವ್ಯ ಪ್ರವಾಹ ಪೀಡಿತ ಹಳ್ಳಿಗಳಿಗೆ ಭೇಟಿ ಕೊಡಿ

ಜಿಲ್ಲೆಯಲ್ಲಿ ಹೆಚ್ಚು ಮಳೆ ಅಥವಾ ನದಿ-ಜಲಾಶಯದ ಮೂಲಕ ನೀರು ಹರಿದು ಬಂದ ಸಂದರ್ಭದಲ್ಲಿ ಸಂಭವಿಸಬಹುದಾದ 153 ಗ್ರಾಮ ಒಳಗೊಂಡ 64 ಗ್ರಾಮ ಪಂಚಾಯ್ತಿಗಳನ್ನು ಪ್ರವಾಹ ಪೀಡಿತ ಗ್ರಾಮಗಳೆಂದು ಗುರುತಿಸಿದೆ. ತಹಸೀಲ್ದಾರರು, ತಾಪಂ ಇಓಗಳು ಕೂಡಲೇ ಇಂತಹ ಹಳ್ಳಿಗಳಿಗೆ ಭೇಟಿ ನೀಡಿ ಕಾಳಜಿ ಕೇಂದ್ರ, ಜನರ ರಕ್ಷಣೆ, ಮುಂಜಾಗ್ರತೆ ಕ್ರಮಗಳ ಬಗ್ಗೆ ಈಗಲೇ ಸಿದ್ಧತೆ ಮಾಡಿಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಮಳೆಗಾಲ ಅರಂಭವಾದ ನಂತರ ಜಲಮೂಲಗಳಿಗೆ ಹೊಸ ನೀರು ಸೇರಿ ಕಲುಷಿತ ನೀರು ಪೂರೈಕೆಯಾಗಿ ಸಾಂಕ್ರಾಮಿಕ ರೋಗ ಉಲ್ಭಣಕ್ಕೆ ಸಾಧ್ಯತೆ ಇರುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಸಾರ್ವಜನಿಕ ಆರೋಗ್ಯ ಬಗ್ಗೆ ಸಾಂಕ್ರಾಮಿಕ ರೋಗ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇವಾಗಿನಿಂದಲೆ ಅರಿವು ಮೂಡಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ನಮ್ಮ ಜವಾಬ್ದಾರಿಯಾಗಬೇಕು. ಕಲುಷಿತ ನೀರು ಸೇವನೆಯಿಂದ ಯಾವುದೇ ಮಾನವ ಪ್ರಾಣ ಹಾನಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''