ಕೋಟೆ ಚಂದ್ರಮೌಳೇಶ್ವರ ಬ್ರಹ್ಮರಥೋತ್ಸವ

KannadaprabhaNewsNetwork |  
Published : Feb 05, 2026, 02:00 AM IST
4ಎಚ್ಎಸ್ಎನ್13 :  ಚನ್ನರಾಯಪಟ್ಟಣದ ಕೋಟೆ ಚಂದ್ರಮೌಳೇಶ್ವರ ಬ್ರಹ್ಮರಥೋತ್ಸವದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಕೋಲಾಟ ಆಡಿದರು. | Kannada Prabha

ಸಾರಾಂಶ

ದೇವಾಲಯದಲ್ಲಿನ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾ ಮೃತ ಅಭಿಷೇಕ, ಶಿವನ ಪಾರಾಯಣ, ಜಿಲ್ವಾಪತ್ರಾರ್ಚನೆ ಮಾಡಿದ ನಂತರ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ದೇವರಿಗೆ ಅಲಂಕಾರ ಮಾಡಲಾಯಿತು. ಅಡ್ಡೆಯಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದರು. ನಂತರ ಉತ್ಸವ ದೇವರನ್ನು ಕೋಟೆ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಆರಾಧ್ಯ ದೈವ ಕೋಟೆ ಚಂದ್ರಮೌಳೇಶ್ವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.ದೇವಾಲಯದಲ್ಲಿನ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾ ಮೃತ ಅಭಿಷೇಕ, ಶಿವನ ಪಾರಾಯಣ, ಜಿಲ್ವಾಪತ್ರಾರ್ಚನೆ ಮಾಡಿದ ನಂತರ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ದೇವರಿಗೆ ಅಲಂಕಾರ ಮಾಡಲಾಯಿತು. ಅಡ್ಡೆಯಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದರು. ನಂತರ ಉತ್ಸವ ದೇವರನ್ನು ಕೋಟೆ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಕೋಟೆ ಬಡಾವಣೆಯಲ್ಲಿ ಭಕ್ತರು ತಮ್ಮ ಮನೆ ಮುಂಭಾಗ ಶುಚಿ ಮಾಡಿ ನೀರಿನಿಂದ ಸ್ವಚ್ಛಗೊಳಿಸಿ ರಂಗೋಲಿ ಬಿಟ್ಟು ದೇವರನ್ನು ಬರಮಾಡಿಕೊಂಡರು. ದೇವರು ತಮ್ಮ ಮನೆ ಬಾಗಿಲಿಗೆ ಆಗಮಿಸಿದಾಗ ಹಣ್ಣುಕಾಯಿ ನೀಡಿ ಪೂಜೆ ಮಾಡಿಸಿದರು, ಇದಾದ ಬಳಿಕ ಉತ್ಸವ ದೇವರು ಚಂದ್ರಮೌಳೇಶ್ವರ ದೇವಾಲಯದ ಸಮೀಪಕ್ಕೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.ಉತ್ಸವ ದೇವರು ರಥಕ್ಕೆ ಪ್ರತಿಷ್ಠಾಪನೆಯಾದ ಮೇಲೆ ರಥಕ್ಕೆ ಬಲಿ ನೀಡಿ, ಮಂಗಳವಾದ್ಯದೊಂದಿಗೆ ಪೂಜೆ ನೆರವೇರಿಸಿದ ನಂತರ ರಥದ ಮುಂಭಾಗದಲ್ಲಿನ ಬಾಳೆ ಕಂಬ ಕುಡಿಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಹಾಜರಿದ್ದು ಭಕ್ತರು ರಥಕ್ಕೆ ದವನ ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿಯಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ಟ ಮತ್ತು ಅರ್ಚಕ ವೃಂದ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಮಹಾ ಮಂಗಳಾರತಿ ಮಾಡಿದರು. ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ರಥ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಹಲವು ಭಕ್ತರು ಕಳಸ ಹೊತ್ತು ತಮ್ಮ ಇಷ್ಟಾರ್ಥ ಪ್ರಾರ್ಥನೆ ಸಲ್ಲಿಸಿದರು.ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಜಿಲ್ಲೆಗೆ ಚನ್ನರಾಯಪಟ್ಟಣ ತಾಲೂಕು ದೇವಾಲಯದ ಕಳಸವಿದ್ದಂತೆ. ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ರಾಷ್ಟ್ರಮಟ್ಟದಲ್ಲಿಯೂ ಧಾರ್ಮಿಕ ಕಾರ್ಯಕ್ರಮ ನಡೆಯುವುದು ಈ ತಾಲೂಕಿನಲ್ಲಿ ಮಾತ್ರ, ಇದು ಜಿಲ್ಲೆಗೆ ಹೆಮ್ಮಯ ಸಂಗತಿಯಾಗಿದೆ. ಜಾತ್ರೆ ಹಾಗೂ ಹಬ್ಬ ಸಾರ್ವಜನಿಕರನ್ನು ಒಗ್ಗೂಡಿಸುವುದರೊಂದಿಗೆ ಪಟ್ಟಣ ಹಾಗೂ ಗ್ರಾಮದ ಜನತೆಯ ದ್ವೇಷ ಮರೆತು ಸಂತೋಷಕರ ವಾತಾವರಣ ಸೃಷ್ಟಿಸುವ ಮಹತ್ವ ಹೊಂದಿದೆ, ಅನಿರೀಕ್ಷಿತವಾಗಿ ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದೇನೆ, ಭಕ್ತರ ಸ್ವಾಗತಿಸಿ ನನ್ನೊಟ್ಟಿಗೆ ರಥೋತ್ಸವದಲ್ಲಿ ಹೆಜ್ಜೆ ಹಾಕಿದ್ದು ಬಹಳ ಸಂತೋಷ ತಂದಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಕೋಟೆ ಮೋಹನ್ ಮಾತನಾಡಿ, ಹಲವು ದಶಕಗಳಿಂದ ಪ್ರತಿ ವರ್ಷವೂ ಪುರಸಭೆ ಸಹಕಾರದಲ್ಲಿ ದೇವರ ಮನೆತನದವರ ಸಹಕಾರದಲ್ಲಿ ರಥೋತ್ಸವ ನೆರವೇರಿಸಲಾಗುತ್ತಿದೆ. ಈ ವರ್ಷ ಪುರಸಭೆಯಿಂದ ರಥದ ಮನೆ, ನವಗ್ರಹ ಮಂಟಪ ನಿರ್ಮಾಣ ಮಾಡಿ ದೇವಾಲಯಕ್ಕೆ ನೀಡಲಾಗಿದೆ ಎಂದರು. ರಥೋತ್ಸವಕ್ಕೆ ಮೊದಲು ವಿವಿಧ ಕೋಲಾಟ ತಂಡದಿಂದ ದೇವಾಲಯದ ಆವರಣದಲ್ಲಿ ಹಾಗೂ ರಥದ ಮುಂಭಾಗ ಕೋಲಾಟ ನಡೆಯಿತು. ದೇವಾಲಯ ಆವರಣದಲ್ಲಿ ಸೋಮನ ಕುಣಿತ ನಡೆಯಿತು.

ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳಾದ ಕೃಷ್ಣ ಪ್ರಸಾದ್, ವೆಂಕಟೇಶ್, ವಿಶ್ವನಾಥ್, ಲಕ್ಷ್ಮೀಶ, ಶಾಮಿರಘು, ಮಂಜ ಹೆಬ್ಬಾರ್‌, ಯೋಗಾನಂದ್, ಪುರಸಭಾ ಮಾಜಿ ಅಧ್ಯಕ್ಷರಾದ ಬನಶಂಕರಿ, ಶಶಿಧರ್‌, ಮಾಜಿ ಸದಸ್ಯರಾದ ರಾಣಿ, ರಾಧಾ, ಕವಿತಾ, ಲಕ್ಷ್ಮೀ, ಭಾಗ್ಯಮ್ಮ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಯತೀಶ್ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?