ಜುಲೈ 21ರಂದು 45ನೇ ರೈತ ಹುತಾತ್ಮರ ದಿನಾಚರಣೆ

KannadaprabhaNewsNetwork |  
Published : Jul 20, 2025, 01:18 AM IST
ಪೋಟೋ: 18ಎಸ್‌ಎಂಜಿಕೆಪಿ07ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಗದಗ ಜಿಲ್ಲೆಯ ನರಗುಂದದಲ್ಲಿ ಜು.21ರಂದು ಬೆಳಿಗ್ಗೆ 11 ಗಂಟೆಗೆ 45ನೇ ರೈತ ಹುತಾತ್ಮರ ದಿನ ಆಚರಿಸಲಾಗುವುದು. ಈ ದಿನಾಚರಣೆಯನ್ನು ಇತ್ತೀಚೆಗೆ ದೇವನಹಳ್ಳಿ, ಚನ್ನರಾಯಪಟ್ಟಣ ಭೂಸ್ವಾಧೀನದ ವಿರುದ್ಧದ ಹೋರಾಟಕ್ಕೆ ಸಂದ ಜಯ ಎಂದು ಅರ್ಪಣೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗದಗ ಜಿಲ್ಲೆಯ ನರಗುಂದದಲ್ಲಿ ಜು.21ರಂದು ಬೆಳಿಗ್ಗೆ 11 ಗಂಟೆಗೆ 45ನೇ ರೈತ ಹುತಾತ್ಮರ ದಿನ ಆಚರಿಸಲಾಗುವುದು. ಈ ದಿನಾಚರಣೆಯನ್ನು ಇತ್ತೀಚೆಗೆ ದೇವನಹಳ್ಳಿ, ಚನ್ನರಾಯಪಟ್ಟಣ ಭೂಸ್ವಾಧೀನದ ವಿರುದ್ಧದ ಹೋರಾಟಕ್ಕೆ ಸಂದ ಜಯ ಎಂದು ಅರ್ಪಣೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇವನಹಳ್ಳಿ ಚನ್ನರಾಯಪಟ್ಟಣದ ಭೂಸ್ವಾಧೀನದ ಹೋರಾಟ, 1198 ದಿನಗಳ ಕಾಲ ನಡೆಯಿತು. 1777 ಎಕರೆ ರೈತರ ಜಮೀನನ್ನು ಕೆಐಎಡಿಬಿಗೆ ನೋಟೀಫಿಕೇಷನ್ ಮಾಡಿದ್ದನ್ನು ವಿರೋಧಿಸಿ, ಈ ಹೋರಾಟ ನಡೆದಿತ್ತು. ಈ ಹೋರಾಟಕ್ಕೆ ಕಾರ್ಮಿಕ, ದಲಿತ, ಪ್ರಗತಿಪರರು, ಸಿನಿಮಾ ನಟರು, ಕಲಾವಿದರು, ಬೆಂಬಲ ವ್ಯಕ್ತಪಡಿಸಿದ್ದರು. ಸರ್ಕಾರ ಹೋರಾಟಕ್ಕೆ ಮಣಿದು ಸ್ವತಃ ಮುಖ್ಯಮಂತ್ರಿಗಳೇ ನೋಟಿಫಿಕೇಷನ್ ಮಾಡಿದ್ದನ್ನು ಕೈಬಿಟ್ಟಿದ್ದಾರೆ. ಇದು ಹೋರಾಟದ ಫಲವಾಗಿದೆ. ಹಾಗಾಗಿ ಈ ಜಯವನ್ನು ಇಲ್ಲಿಯವರೆಗೆ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ರೈತರಿಗೆ ಅರ್ಪಣೆ ಮಾಡಲಾಗುವುದು ಎಂದರು.

ಜು.21 ರಂದು ನಡೆಯುವ ರೈತ ಹುತಾತ್ಮ ದಿನಾಚರಣೆಯ ಜತೆಗೆ ಬೃಹತ್ ಸಭೆ ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ರೈತರ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಚರ್ಚಿಸಲಾಗುವುದು.

ಉತ್ತರ ಕರ್ನಾಟಕದ ಭಾಗದಲ್ಲಿ ನೀರಾವರಿ ಯೋಜನೆಯಾದ ಮಹದಾಯಿ ಯೋಜನೆ ಜಾರಿಯಾಗಬೇಕು. ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ಹಣ ಬಿಡುಗಡೆ ಮಾಡಬೇಕು. ಸಮಗ್ರ ನೀರಾವರಿ ಯೋಜನೆ ಜಾರಿಮಾಡಬೇಕು. ರೈತ ವಿರೋಧಿ, ಮೂರು ಕೃಷಿ ಕಾಯ್ದೆಯನ್ನು ವಾಪಾಸ್ ಪಡೆಯಬೇಕು, ಅತಿವೃಷ್ಟಿ, ಅನಾವೃಷ್ಟಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು, ಗೊಬ್ಬರದ ಬೆಲೆ ಏರಿಕೆ ತಡೆಯಬೇಕು. ಬೆಳೆವಿಮೆ ತಿದ್ದುಪಡಿ ಮಾಡಬೇಕು. ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹರಿಸಬೇಕು ಎಂಬುದು ಸೇರಿದಂತೆ ಸುಮಾರು 19ಕ್ಕೂ ಹೆಚ್ಚು ರೈತರ ಸಮಸ್ಯೆಗಳನ್ನು ಈ ಸಭೆಗಳಲ್ಲಿ ಚಿರ್ಚಿಸಿ, ಮುಂದಿನ ಹೋರಾಟದ ರೂಪುರೇಷಗಳನ್ನು ನಿರ್ಧರಿಸಲಾಗುವುದು ಎಂದರು.

ನಾವು ಅಭಿವೃದ್ಧಿಗಳ ವಿರೋಧಿಗಳಲ್ಲ, ಆದರೆ ಫಲವತ್ತಾದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂಬುದು ನಮ್ಮ ಆಗ್ರಹ. ಸುಪ್ರೀಂಕೋರ್ಟ್ ಕೂಡ ಇದನ್ನೇ ಹೇಳುತ್ತದೆ. ಸಾವಿರಾರು ಎಕರೆ ಜಮೀನುಗಳನ್ನು ರೈತರಿಂದ ಖರೀದಿಸಿ ಲ್ಯಾಂಡ್ ಬ್ಯಾಂಕನ್ನಾಗಿ ಮಾಡಲು ಸರ್ಕಾರ ಹೊರಟಿದೆ. ನಾವು ಇದನ್ನು ವಿರೋಧಿಸುತ್ತಿದ್ದೇವೆ ಈ ಭೂಮಾಫಿಯಾದ ಹಿಂದೆ ರಾಜಕಾರಣ ಇದ್ದೇ ಇರುತ್ತದೆ. ಬೆಂಗಳೂರು ಸುತ್ತಮುತ್ತಲೇ ಅದರಲ್ಲೂ ಫಲವತ್ತಾದ ಜಮೀನುಗಳನ್ನೇ ಖರೀದಿಸಬೇಕು ಎಂಬ ಉದ್ದೇಶವನ್ನು ನಾವು ಖಂಡಿಸುತ್ತೇವೆ. ಆದ್ದರಿಂದ ರೈತಸಂಘ ಅಭಿವೃದ್ಧಿಯ ವಿರೋಧಿಗಳಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೈತಸಂಘದ ಪದಾಧಿಕಾರಿಗಳಾದ ಹಿಟ್ಟೂರು ರಾಜು, ಪಿ. ಶೇಖರಪ್ಪ, ಎಂ.ಮಹಾದೇವಪ್ಪ, ಎಂ.ಡಿ.ನಾಗರಾಜ್, ಸಿ.ಬಿ.ಹನುಮಂತಪ್ಪ, ಚಂದ್ರಪ್ಪ, ಶಿವಕುಮಾರ್, ರವೀಂದ್ರ ಇದ್ದರು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ