ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸಮೀಪದ ಅರಬಿಳಚಿಯ ಎಕೆ ಕಾಲೋನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗುರುವಾರ ಅಕ್ರಮವಾಗಿ ಪಡಿತರವನ್ನು ಸಾಗಿಸುವಾಗ ಕಾಲೋನಿಯ ಮಹಿಳೆಯರು ಪಡಿತರ ಸಮೇತ ಕಾರ್ಯಕರ್ತೆಯನ್ನು ಹಿಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಶುಕ್ರವಾರ ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಭಾರತಿ ಬಣಕಾರ್ ನೇತೃತ್ವದ ತಂಡ ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಟ್ಟೆಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಅಂಗನವಾಡಿ ಕಾರ್ಯಕರ್ತೆ ಪಡಿತರವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪದಾರ್ಥಗಳನ್ನು ಬೈಕಿನಲ್ಲಿ ಸಾಗಿಸುವಾಗ ವ್ಯಕ್ತಿಯನ್ನು ಅಡ್ಡಗಟ್ಟಿದ ಸ್ಥಳೀಯ ಮಹಿಳೆಯರು ವಸ್ತುಗಳನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ. ಹೊಳೆಹೊನ್ನೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯನ್ನು ವಶಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ರಾಜಿ ಸಂದಾನ ಮಾಡಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿ ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಸ್ಥಳಕ್ಕೆ ಬಂದ ಮೇಲ್ವಿಚಾರಕಿ ಕವಿತಾ ಹಾಗೂ ಸಿಡಿಪಿಒ ರವಿಕುಮಾರ್ ಅಂಗನವಾಡಿ ಕಾರ್ಯಕರ್ತೆ ವರ್ತನೆ ಕಂಡು ಅಧಿಕಾರಿಗಳೆದರು ಕಾರ್ಯಕರ್ತೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕೂಡಲೇ ಕಾರ್ಯಕರ್ತೆಯನ್ನು ಕೆಲಸದಿಂದ ವಜಾಗೊಳಿಸಿ ನಮ್ಮ ಬೀದಿಯ ಅಂಗನವಾಡಿಗೆ ಒಳ್ಳೆಯ ಶಿಕ್ಷಕಿಯನ್ನು ನೇಮಕ ಮಾಡಬೇಕು ಇಲ್ಲವಾದರೆ ನಾಳೆಯಿಂದ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ತಿಳಿಸಿದರು.
ಶುಕ್ರವಾರ ಜಿಲ್ಲಾ ಉಪ ನಿದೇರ್ಶಕಿ ಭಾರತಿ ಬಣಕಾರ್ ನೆತೃತ್ವದ ತಂಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಗಲೀಜು ವಾಸನೆ ಕಂಡು ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಉಪ ನಿರ್ದೇಶಕಿ ಭಾರತಿ ಬಣಕಾರ್ ಬಳಿ ಕಾರ್ಯಕರ್ತೆ ವಿರುದ್ಧ ಹತ್ತಾರು ದೂರು ನೀಡಿದರು. ಗ್ರಾಮಸ್ಥರ ಬೇಡಿಕೆಯಂತೆ ಕಾಲೋನಿಯ ಕೇಂದ್ರಕ್ಕೆ ತಾತ್ಕಾಲಿವಾಗಿ ಬೇರೊಬ್ಬರನ್ನು ಕಳಿಸುವ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದರು. ಅಂಗನವಾಡಿಯಲ್ಲಿ ನಾಪತ್ತೆಯಾಗಿರುವ ಪಡಿತರ ಮೌಲ್ಯವನ್ನು ಕಾರ್ಯಕರ್ತೆಯಿಂದ ವಸೂಲಿ ಮಾಡುವುದಾಗಿ ತಿಳಿಸಿದರು.ಗ್ರಾಪಂ ಸದಸ್ಯ ಕಿರಣ್ ಮೋರೆ, ರೈತ ಮುಖಂಡ ಮಂಜುನಾಥ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಪ್ಪ, ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ರವಿಕುಮಾರ್, ಬಷೀರ್ ಅಹಮ್ಮದ್, ನಾಗಮ್ಮ, ಬಸವರಾಜ್, ಮಂಜಣ್ಣ, ಮಂಜಮ್ಮ, ಗಂಗಮ್ಮ, ಶೋಭ ಇತರರು ಇದ್ದರು.