ಶಿಗ್ಗಾಂವಿ: ವಿಶೇಷ ಮಕ್ಕಳ ಶಿಕ್ಷಣವು ಅವರ ಬದುಕಿನ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದ್ದು, ಇಂತಹ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಕಾರ್ಯದರ್ಶಿ ರಾಜು ಎಂ. ಕುನ್ನೂರ ಅವರು, ಕಿವುಡ–ಮೂಕ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಸಂಸ್ಥೆ ನಿರಂತರ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಶಿಕ್ಷಣದ ಜತೆಗೆ ಸಾಂಸ್ಕೃತಿಕ, ವೃತ್ತಿಪರ ಹಾಗೂ ವ್ಯಕ್ತಿತ್ವ ವಿಕಸನ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಸ್ನೇಹಲತಾ ಕುನ್ನೂರ ಅವರು, ವಿಶೇಷ ಮಕ್ಕಳಿಗೆ ಪ್ರೀತಿ, ಸಹಾನುಭೂತಿ ಮತ್ತು ಸಮರ್ಪಕ ಶಿಕ್ಷಣ ದೊರೆತಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಪ್ರಾಚಾರ್ಯ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಮಾತನಾಡಿ, ಕಿವುಡ–ಮೂಕ ಮಕ್ಕಳಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ದೊರಕಬೇಕಾದರೆ ಪಾಲಕರು, ಶಿಕ್ಷಕರು ಹಾಗೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಿದ್ದಪ್ಪ ಮಸಳಿ, ಮಂಜುಳಾ ಗೋಡಿ, ರೇಣುಕಾ ಮಾಗಿ, ಅರ್ಪಿತಾ ಅರೋರಾ, ವೈಷ್ಣವಿ ಕುನ್ನೂರ, ಮುಖ್ಯೋಪಾಧ್ಯಾಯ ಎಂ.ಬಿ. ನೀರಲಗಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಕ್ಕಳು ಹಾಗೂ ಪಾಲಕರು ಭಾಗವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಶ್ವೇತಾ ಅತ್ತಿಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ನೀರಲಗಿ ವಂದಿಸಿದರು.