ಜ್ಞಾನವ್ಯಾಪಿ ಪ್ರಕರಣ ಮಾದರಿಯಲ್ಲೇ ಮಂಗಳೂರಲ್ಲೂ ಮಸೀದಿ ವಿವಾದ

KannadaprabhaNewsNetwork |  
Published : Feb 02, 2024, 01:04 AM IST
111 | Kannada Prabha

ಸಾರಾಂಶ

ಮಂಗಳೂರು ಹೊರವಲಯದ ಗುರುಪುರದ ಮಳಲಿಯಲ್ಲಿ 2022 ಏ.21ರಂದು ಮಸೀದಿ ನವೀಕರಣದ ವೇಳೆ ಮಂದಿರದ ಕುರುಹು ಕಾಣಿಸಿಕೊಂಡಿದ್ದು, ಅದು ವಿವಾದಕ್ಕೆ ಕಾರಣವಾಗಿತ್ತು. ನ್ಯಾಯಾಲಯದಲ್ಲಿರುವ ಈ ಪ್ರಕರಣದ ಭವಿಷ್ಯದ ದಿಕ್ಸೂಚಿಯಾಗಿದ್ದ ತೀರ್ಪು ಹೊರಬೀಳಬೇಕಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಉತ್ತರ ಪ್ರದೇಶದ ಜ್ಞಾನವ್ಯಾಪಿ ಮಸೀದಿ ವಿವಾದ ವಿಚಾರದಲ್ಲಿ ಅದರ ಸಂಕೀರ್ಣದಲ್ಲಿರುವ ಹಿಂದು ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ವಾರಣಾಸಿ ಕೋರ್ಟ್‌ ಬುಧವಾರ ತೀರ್ಪು ನೀಡಿದೆ. ಇದೇ ಮಾದರಿಯ ವಿವಾದ ಮಂಗಳೂರಿನಲ್ಲೂ ತಲೆದೋರಿದ್ದು, ಕರ್ನಾಟಕ ಹೈಕೋರ್ಟ್‌ ತೀರ್ಪಿಗಾಗಿ ಕಾಯಲಾಗುತ್ತಿದೆ. ಮಂಗಳೂರು ಹೊರವಲಯದ ಗುರುಪುರದ ಮಳಲಿಯಲ್ಲಿ 2022 ಏ.21ರಂದು ಮಸೀದಿ ನವೀಕರಣದ ವೇಳೆ ಮಂದಿರದ ಕುರುಹು ಕಾಣಿಸಿಕೊಂಡಿದ್ದು, ಅದು ವಿವಾದಕ್ಕೆ ಕಾರಣವಾಗಿತ್ತು. ನ್ಯಾಯಾಲಯದಲ್ಲಿರುವ ಈ ಪ್ರಕರಣದ ಭವಿಷ್ಯದ ದಿಕ್ಸೂಚಿಯಾಗಿದ್ದ ತೀರ್ಪು ಹೊರಬೀಳಬೇಕಿದೆ. ಮಳಲಿ ಮಸೀದಿ ವಿಚಾರದಲ್ಲಿ ಮಂಗಳೂರಿನ ಹೆಚ್ಚುವರಿ ಸಿವಿಲ್‌ ನ್ಯಾಯಾಲಯಕ್ಕೆ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರವನ್ನು ಪ್ರಶ್ನಿಸಿ ಮಸೀದಿ ಪರ ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ 15 ದಿನಗಳ ಹಿಂದೆ ವಾದ, ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದೆ. ಒಂದು ವೇಳೆ ಮಂಗಳೂರಿನ ಸಿವಿಲ್‌ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಅವಕಾಶ ಇದೆ ಎಂದು ತೀರ್ಪು ನೀಡಿದರೆ, ವಿಚಾರಣೆ ಮುಂದುರಿಯಲಿದೆ. ಇಲ್ಲದಿದ್ದರೆ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೈಸೂರಿನ ಟ್ರಿಬ್ಯುನಲ್‌ನಲ್ಲಿ ಕೇಸು ದಾಖಲಿಸಿ ವಿಚಾರಣೆ ನಡೆಯುವುದು ಎಂದು ಹಿಂದು ಸಂಘಟನೆ ಪರ ವಕೀಲ ಚಿದಾನಂದ ಕೆದಿಲಾಯ ತಿಳಿಸಿದ್ದಾರೆ. ಈವರೆಗಿನ ಬೆಳವಣಿಗೆ: ಮಸೀದಿ ವಿಚಾರದಲ್ಲಿ ವಿಚಾರಣೆಗೆ ತಡೆ ಸಂಬಂಧಿಸಿ ಮಂಗಳೂರು ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮಳಲಿ ಮಸೀದಿಯ ಕಮಿಟಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ವಿಶ್ವಹಿಂದು ಪರಿಷತ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿತ್ತು. 2022 ಏಪ್ರಿಲ್ 21 ರಂದು ನವೀಕರಣಕ್ಕಾಗಿ ಮಸೀದಿ ಕೆಡವಿದಾಗ ಮಂದಿರದ ಮಾದರಿ ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಮಸೀದಿಯವರು ನವೀಕರಣ ನಡೆಸದಂತೆ ತಡೆಯಾಜ್ಞೆ ತಂದಿದ್ದ ವಿಹಿಂಪ ಬಳಿಕ ತಾಂಬೂಲ ಪ್ರಶ್ನೆಯ ಮೊರೆ ಹೋಗಿತ್ತು. ತಾಂಬೂಲ ಪ್ರಶ್ನೆಯಲ್ಲಿ ಕೂಡ ಅಲ್ಲಿ ಮಠದ ಕುರುಹಿನ ಬಗ್ಗೆ ತಿಳಿದುಬಂದಿತ್ತು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತಾದರೂ ಅದು ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಕೊನೆಗೂ ತೀರ್ಪು ಪ್ರಕಟಿಸಿದ ನ್ಯಾಯಾಲಯ ಮಳಲಿ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ವಿಹಿಂಪ ಸಲ್ಲಿಸಿದ ಅರ್ಜಿಯನ್ನು ಎತ್ತಿಹಿಡಿದಿತ್ತು. ಈ ಮೂಲಕ ಮೊದಲ ಹಂತದ ಹೋರಾಟದಲ್ಲಿ ವಿಹಿಂಪ ಗೆಲುವು ಪಡೆದಿತ್ತು. ಈ ತೀರ್ಪು ಮಳಲಿ ಮಸೀದಿ ವಿವಾದದ ಮುಂದಿನ ಎಲ್ಲ ಅರ್ಜಿಗಳ ಕುರಿತ ವಿಚಾರಣೆಗೆ ಹೊಸ ದಿಕ್ಕು ಕಲ್ಪಿಸಿದ್ದು, 2022 ಡಿಸೆಂಬರ್‌ನಿಂದ ಮಂಗಳೂರು ಕೋರ್ಟ್ ನಲ್ಲಿ ಈ ಬಗ್ಗೆ ವಾದ-ಪ್ರತಿವಾದಗಳು ಆರಂಭಗೊಂಡಿತ್ತು.2 ಕಾಯ್ದೆ ಬಗ್ಗೆ ಸಿವಿಲ್‌ ತೀರ್ಪು: ವಕ್ಫ್ ಕಾಯ್ದೆ 1991ರ ಸೆಕ್ಷನ್ 85ರ ಅಡಿ ಸಿವಿಲ್ ಕೋರ್ಟ್‌ಗೆ ಅರ್ಜಿ ವಿಚಾರಣೆ ಅಧಿಕಾರ ಇಲ್ಲ ಎಂದು ಮಳಲಿ ಮಸೀದಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು‌. ಅಲ್ಲದೆ ಸಿವಿಲ್ ಕಾಯ್ದೆ 151ಅಡಿಯಲ್ಲಿ ಮಂಗಳೂರು ಕೋರ್ಟ್‌ಗೆ ವಿಹಿಂಪ ಅರ್ಜಿ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಇದರ ಸುದೀರ್ಘ ವಿಚಾರಣೆ ನಡೆಸಿ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಈ ಅರ್ಜಿಗಳನ್ನು ವಜಾಗೊಳಿಸಿದೆ. ಈ ತೀರ್ಪನ್ನು ಹೈ ಕೋರ್ಟ್‌ನಲ್ಲಿ ಮಸೀದಿ ಪರ ಅರ್ಜಿದಾರರು ಪ್ರಶ್ನಿಸಿದ್ದಾರೆ. ಸಿವಿಲ್‌ ಕೋರ್ಟ್‌ನ ಅಧಿಕಾರ ವ್ಯಾಪ್ತಿ ಬಗ್ಗೆ ವಿಚಾರಣೆ ನಡೆಸಿರುವ ಹೈ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ