ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್‌ ಇಂಡಿಯಾ ವಿಮಾನಗಳ ರಿಪೇರಿ ಘಟಕಕ್ಕೆ ಶಂಕು ಸ್ಥಾಪನೆ

KannadaprabhaNewsNetwork |  
Published : Sep 05, 2024, 02:24 AM ISTUpdated : Sep 05, 2024, 07:20 AM IST
Air India 1 | Kannada Prabha

ಸಾರಾಂಶ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ತನ್ನ ವಿಮಾನ ರಿಪೇರಿ ಮಾಡಿಕೊಳ್ಳಲು ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

 ಬೆಂಗಳೂರು :  ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 35 ಎಕರೆ ಭೂಪ್ರದೇಶದಲ್ಲಿ ತನ್ನ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣ ಬೃಹತ್‌ ಘಟಕ (ಎಂಆರ್‌ಒ) ನಿರ್ಮಾಣಕ್ಕೆ ಬುಧವಾರ ಚಾಲನೆ ನೀಡಿದ್ದು, ಶೀಘ್ರವೇ ಇದು ಕಾರ್ಯಾರಂಭ ಮಾಡಲಿದೆ.

ಇದೇ ವರ್ಷದ ಆರಂಭದಲ್ಲಿ ಎಂಆರ್‌ಒ ಕೇಂದ್ರ ನಿರ್ಮಾಣಕ್ಕಾಗಿ ಏರ್‌ ಇಂಡಿಯಾ ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ಘಟಕದಿಂದ ದೇಶದ 1,200ಕ್ಕೂ ಹೆಚ್ಚಿನ ವಿಮಾನಯಾನ ಕ್ಷೇತ್ರದ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ. ಜೊತೆಗೆ ರಾಜ್ಯದ 200ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಪೂರಕವಾಗಿರಲಿದೆ. ಮುಖ್ಯವಾಗಿ ರಾಜ್ಯವು ಜಾಗತಿಕವಾಗಿ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸಲಿದೆ.

ಅದ್ಧೂರಿ ಕಾರ್ಯಕ್ರಮದಲ್ಲಿ ಎಂಆರ್‌ಒ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು. ಏರ್‌ಇಂಡಿಯಾ- ತನ್ನ ವಿಮಾನಗಳನ್ನು ಆಧುನೀಕರಿಸುತ್ತಿದ್ದು, ಜೊತೆಗೆ ಜಾಗತಿಕ ಕಾರ್ಯಾಚರಣೆ ವಿಸ್ತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ‘ಎಂಆರ್‌ಒʼ ಘಟಕವು ಏರ್ ಇಂಡಿಯಾ ಗ್ರೂಪ್ ಏರ್‌ಲೈನ್ಸ್‌ ವಿಮಾನಗಳ ನಿರ್ವಹಣಾ ಸೇವೆಗಳಿಗೆ ಪ್ರಮುಖ ಕೇಂದ್ರವಾಗಿರಲಿದೆ.

ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕಿ ಗುಂಜನ್‌ ಕೃಷ್ಣ ಮಾತನಾಡಿ, ‘ರಾಜ್ಯದಲ್ಲಿ ಎಂಆರ್‌ಒ ಘಟಕ ನಿರ್ಮಾಣ ಆಗುತ್ತಿರುವುದು ಒಂದು ಮೈಲಿಗಲ್ಲು. ಏರ್ ಇಂಡಿಯಾದ ಈ ತ್ವರಿತ ನಿರ್ಧಾರ ಸ್ವಾಗತಾರ್ಹ. ಇದು ಬೆಳೆಯುತ್ತಿರುವ ಭಾರತದ ವಿಮಾನಯಾನ ಕ್ಷೇತ್ರಕ್ಕೆ ಮಾತ್ರ ಪೂರಕವಾಗಿರಲಿದೆ. ಅಲ್ಲದೆ ಕರ್ನಾಟಕ ರಾಜ್ಯಕ್ಕೂ ಸಹ ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ. (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್‌ ಮಾತನಾಡಿ, ‘ಕೆಂಪೇಗೌಡ ವಿಮಾನ ನಿಲ್ದಾಣ ದೇಶದ ಪ್ರಮುಖ ವಿಮಾನಯಾನ ಕೇಂದ್ರವಾಗಿ ಬೆಳೆಯುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಎಂಆರ್‌ಒ ಕೇಂದ್ರ ಪ್ರಾದೇಶಿಕ ಸಂಪರ್ಕ ಹೆಚ್ಚಿಸುವುದು ಮಾತ್ರವಲ್ಲ, ಸ್ಥಳೀಯ ಪ್ರತಿಭೆ ಮತ್ತು ವಹಿವಾಟುಗಳಿಗೆ ಅಮೂಲ್ಯವಾದ ಅವಕಾಶ ಸೃಷ್ಟಿಸಲಿದೆ’ ಎಂದರು.

ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್‌ ಮಾತನಾಡಿ, ‘ಭಾರತದ ವಿಮಾನಯಾನ ಕ್ಷೇತ್ರ ಗಮನಾರ್ಹ ಬೆಳವಣಿಗೆ ಪಥದಲ್ಲಿದೆ. ಇದರಲ್ಲಿ ಏರ್ ಇಂಡಿಯಾ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಬೆಂಗಳೂರು ‘ಎಂಆರ್‌ಒʼ ಸೌಲಭ್ಯವು ಭಾರತದ ವಿಮಾನಯಾನ ಸೌಲಭ್ಯವನ್ನು ಬಲಪಡಿಸಲಿದೆ. ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಇದು ಅತ್ಯಂತ ಮುಖ್ಯ ಹೆಜ್ಜೆಯಾಗಿದೆ’ ಎಂದು ಹೇಳಿದರು.

ಎಂಆರ್‌ಒ ಘಟಕ

ವಿಶ್ವದರ್ಜೆಯ ವಿಮಾನ ನಿರ್ವಹಣಾ ತಂತ್ರಜ್ಞಾನ ಸುಸಜ್ಜಿತವಾಗಿ ಎಂಆರ್‌ಒ ಘಟಕ ನಿರ್ಮಾಣ ಆಗಲಿದೆ. ಒಂದೇ ಚಾವಣಿಯಡಿ ಚಿಕ್ಕ ಹಾಗೂ ದೊಡ್ಡ ಗಾತ್ರದ ವಿಮಾನಗಳನ್ನು ಇರಿಸುವ ಮೆಗಾ ಹ್ಯಾಂಗರ್ ಸೌಲಭ್ಯ ಹೊಂದಿರಲಿದೆ. ಪೇಂಟ್ ಹ್ಯಾಂಗರ್ ಸೇರಿ ಹೆಚ್ಚಿನ ವಿಮಾನಗಳ ಸೇವೆಗಾಗಿ ಹೆಚ್ಚುವರಿ ಹ್ಯಾಂಗರ್‌ಗಳನ್ನು ಸೇರ್ಪಡೆ ಮಾಡಲು ಅವಕಾಶ ಇಟ್ಟುಕೊಳ್ಳಲಾಗುವುದು. ಈ ʼಎಂಆರ್‌ಒʼ ಘಟಕ ಅಭಿವೃದ್ಧಿಪಡಿಸಲು ಏರ್ ಇಂಡಿಯಾವು ಎಸ್‌ಐಎ ಎಂಜಿನಿಯರಿಂಗ್ ಕಂಪನಿ (ಎಸ್‌ಐಎಇಸಿ) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ತರಬೇತಿ ಸಂಸ್ಥೆ:

ಇದಲ್ಲದೆ, ಏರ್‌ಇಂಡಿಯಾ 2025ರಲ್ಲಿ ಬೆಂಗಳೂರಿನಲ್ಲಿ ವಿಮಾನ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಚಟುವಟಿಕೆಗೆ ನಿರ್ವಹಣಾ ತರಬೇತಿ ಸಂಸ್ಥೆಯನ್ನು (ಬಿಎಂಟಿಒ) ಆರಂಭಿಸಲು ಯೋಜಿಸಿದೆ. ಇದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣೀಕೃತ ವಿಮಾನಯಾಬ ಎಂಜಿನಿಯರ್ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ