ಶೀಘ್ರ ಭದ್ರ ಉಪ ಕಣಿವೆ 3ನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ : ಶಾಸಕ ತಮ್ಮಯ್ಯ

KannadaprabhaNewsNetwork |  
Published : Oct 27, 2025, 12:00 AM IST
ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಕೆರೆಗೆ ಶಾಸಕ ಎಚ್‌.ಡಿ.ತಮ್ಮಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹಾಗೂ ಮುಖಂಡರು ಭಾನುವಾರ ಬಾಗಿನ ಅರ್ಪಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ನವೆಂಬರ್ ಅಂತ್ಯಕ್ಕೆ ನೇರವೇರಲಿರುವ ಭದ್ರ ಉಪ ಕಣಿವೆ ಯೋಜನೆ ಮೂರನೇ ಹಂತದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ನವಂಬರ್‌ ತಿಂಗಳ ಅಂತ್ಯದಲ್ಲಿ ಶಂಕುಸ್ಥಾಪನೆ, ಈಶ್ವರಹಳ್ಳಿ ಹಾಗೂ ಕಳಸಾಪುರ ಕೆರೆಗಳಿಗೆ ಬಾಗಿನ ಅರ್ಪಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನವೆಂಬರ್ ಅಂತ್ಯಕ್ಕೆ ನೇರವೇರಲಿರುವ ಭದ್ರ ಉಪ ಕಣಿವೆ ಯೋಜನೆ ಮೂರನೇ ಹಂತದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಈಶ್ವರಹಳ್ಳಿ ಹಾಗೂ ಕಳಸಾಪುರ ಕೆರೆಗಳಿಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿ ಇನ್ನು ಎರಡು ವರ್ಷದೊಳಗಾಗಿ ರಣಘಟ್ಟ ಯೋಜನೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ. ಇದರೊಂದಿಗೆ ಭದ್ರ ಉಪ ಕಣಿವೆ ಯೋಜನೆ 3ನೇ ಹಂತದ ಕಾಮಗಾರಿ ಪೂರ್ಣಗೊಂಡಲ್ಲಿ ಎಲ್ಲಾ ಕೆರೆಗಳನ್ನು ಪ್ರತಿ ವರ್ಷ ನೀರು ತುಂಬಿಸ ಬಹುದು ಎಂದು ಹೇಳಿದರು.ಗಾಳಿ, ನೀರು, ಭೂಮಿಯನ್ನು ತಾಯಿಗೆ ಹೋಲಿಸಿ ಪೂಜೆ ಮಾಡುವುದು ಭಾರತದಲ್ಲಿ ಮಾತ್ರ. ಹಿಂದಿನಿಂದಲೂ ನಮ್ಮ ಹಿರಿಯರು ಈ ಸಂಸ್ಕಾರ ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ಇಂದು ನಾವು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ ಮಾಡುತ್ತಿದ್ದೇವೆ. ಇಡೀ ಪ್ರಪಂಚದಲ್ಲಿ ಕೃಷಿಯನ್ನೇ ಅವಲಂಬಿಸಿರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕೃಷಿ ಎಂದರೆ ರೈತ. ರೈತ ಎಂದರೆ ಕೃಷಿ. ರೈತನೇ ನಮ್ಮ ದೇಶದ ಬೆನ್ನೆಲುಬು. ಹೀಗಾಗಿ ರೈತರ ಶ್ರೇಯೋಭಿವೃದ್ಧಿಗೆ ಪ್ರತಿನಿಧಿಗಳು ಶ್ರಮಿಸಬೇಕು ಎಂದು ಹೇಳಿದರು.ಮಳೆ ಬಂದ ಸಂದರ್ಭದಲ್ಲಿ ಕರಗಡ ಯೋಜನೆ ಮೂಲಕ ಈಶ್ವರಹಳ್ಳಿ ಹಾಗೂ ಕಳಸಾಪುರ ಭಾಗದ ಕೆರೆಗಳಿಗೆ ನೀರು ತುಂಬಿಸ ಲಾಗುತ್ತಿದೆ. ಈ ಯೋಜನೆಗೆ ಮಲ್ಲಿಕಾರ್ಜುನ, ಧರ್ಮೇಗೌಡ, ಸಿ.ಟಿ.ರವಿ, ಗಾಯತ್ರಿ ಶಾಂತೇಗೌಡ ಅವರ ಕೊಡುಗೆ ದೊಡ್ಡ ಮಟ್ಟದಲ್ಲಿ ಇದೆ. ಕರಗಡ ಯೋಜನೆಯಿಂದ ಕೇವಲ 3 ಕೆರೆಗಳನ್ನು ಮಾತ್ರ ತುಂಬಿಸಲು ಸಾಧ್ಯ. ಆದರೆ, ಎತ್ತಿನಹೊಳೆ ಯೋಜನೆಯಿಂದ ದೇವನೂರು ಹಾಗೂ ಬೆಳವಾಡಿ ಭಾಗದ ಕೆರೆಗಳು ಭರ್ತಿಯಾಗಿವೆ. ರಣಘಟ್ಟ ಹಾಗೂ ಭದ್ರ ಉಪ ಕಣಿವೆ ಯೋಜನೆಗಳು ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಬರಗಾಲದ ಪ್ರಶ್ನೆಯೇ ಬರುವುದಿಲ್ಲ ಎಂದರು.ದೇವಿ ಕೆರೆ ನಾಲೆ ಸರಿಯಾಗಿ ಇಲ್ಲದಿರುವ ಕಾರಣದಿಂದ ಕೆರೆ ಭರ್ತಿಯಾಗುತ್ತಿಲ್ಲ. ಹೀಗಾಗಿ ಕಟ್ಟಿನ ಹೊಳೆಯಿಂದ ದೇವಿಕೆರೆ ವರೆಗೆ ನೀರು ಹರಿಸಲು ನೂತನ ಕಾಲುವೆ ನಿರ್ಮಾಣಕ್ಕೆ ಸರ್ಕಾರ ₹9.9 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ದೇವಿಕೆರೆ ಭರ್ತಿಯಾಗಲಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಅಭಿವೃದ್ಧಿ ರಥದ ಜೊತೆ ಜೊತೆಗೆ ರೈತರ ಬಾಳನ್ನು ಹಸನು ಮಾಡುವ ರಥ ಎಳೆಯುತ್ತಿದೆ. ನಾನೂ ಹ ನೀರಾವರಿ ಯೋಜನೆಗಳು ಶಾಶ್ವತವಾಗಿರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳು ಯಾವಾಗಲೂ ರೈತರ ಪರವಾಗಿ ಕೆಲಸ ಮಾಡಬೇಕು. ನಾವು ಮಾಡಿದ ಪುಣ್ಯ ನಮ್ಮ ಖಾತೆಗೆ ಸೇರುತ್ತದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಪ್ರಕೃತಿಗೆ ನಮಿಸುವುದು ಹಾಗೂ ಸ್ಮರಿಸುವುದು ಭಾರತೀಯ ಸನಾತನ ಸಂಸ್ಕೃತಿ ಒಂದು ಭಾಗ. ಕರಗಡ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಯ ಸೂಕ್ತ ನಿರ್ವಹಣೆ ಮಾಡಿ ನೀರು ಹರಿಸಿದರೆ ಕೇವಲ 35 ದಿನಗಳಲ್ಲಿ ಈ ಕೆರೆಗಳು ಭರ್ತಿ ಯಾಗುತ್ತಿದ್ದವು. ಆದರೆ, ಸೂಕ್ತ ನಿರ್ವಹಣೆ ಲೋಪದಿಂದ ಅಕ್ಟೋಬರ್ ಕೊನೆಗೆ ಕೆರೆ ತುಂಬಿದೆ. ಅದು ಮಳೆ ಕಾರಣ ದಿಂದಾಗಿ. ಒಂದು ವೇಳೆ ಮಳೆ ಬಾರದೆ ಇದ್ದಿದ್ದಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈಶ್ವರಹಳ್ಳಿ ಹಾಗೂ ಕಳಸಾಪುರ ಭಾಗಗಳಿಗೆ 2018 ರಿಂದ 2023 ರ ವರೆಗೆ ₹65 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಿದ್ದೇವೆ. ಮಾಗಡಿ- ಜಾವಗಲ್‌ ರಸ್ತೆಯನ್ನು ₹25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದರು.₹1281 ಕೋಟಿ ವೆಚ್ಚದಲ್ಲಿ ಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಭದ್ರ ಉಪ ಕಣಿವೆ ಯೋಜನೆ ಆರಂಭಿಸ ಲಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ 3ನೇ ಹಂತದ ಕಾಮಗಾರಿಗೆ ಟೆಂಡರ್‌ ಅಂತಿಮಗೊಂಡಿದೆ. ಇನ್ನು ರಣಘಟ್ಟ ಯೋಜನೆಯಲ್ಲಿ 900 ಮೀಟರ್‌ ಕಾಲುವೆ ಕಾಮಗಾರಿ ಬಾಕಿ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬೆಳವಾಡಿ ರವೀಂದ್ರ, ಈಶ್ವರಹಳ್ಳಿ ಮಹೇಶ್, ಪ್ರಮುಖರಾದ ಶಂಕರನಾಯ್ಕ, ಕೆಂಗೇಗೌಡ, ಅಚ್ಚುತರಾಯರು, ಅಮೀರ್, ಮಧು, ಯೋಗೀಶ್, ಶಿವಮ್ಮ, ಚಂದ್ರಶೇಖರ್ ಇದ್ದರು.

26 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಕೆರೆಗೆ ಶಾಸಕ ಎಚ್‌.ಡಿ.ತಮ್ಮಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹಾಗೂ ಮುಖಂಡರು ಭಾನುವಾರ ಬಾಗಿನ ಅರ್ಪಿಸಿದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ