- ರಾತ್ರಿಯಿಡೀ ತೋಟದಲ್ಲಿ ತಿಂದುಂಡು ಮುಂಜಾನೆಯೊಳಗೆ ಕಾಡು ಸೇರುವ ಪುಂಡಾನೆ । ಆನೆ ಸೆರೆಗೆ ಅನುಮತಿ ಕೋರಿ ಪತ್ರ
- - -
ಕನ್ನಡಪ್ರಭ ವಾರ್ತೆ ದಾವಣಗೆರೆವರ್ಷಗಳ ನಂತರ ಮತ್ತೆ ಚನ್ನಗಿರಿ ತಾಲೂಕಿನ ಅರಣ್ಯದಂಚಿನ ಗ್ರಾಮಗಳು, ತೋಟ, ಜಮೀನುಗಳಲ್ಲಿ ಕಾಡಾನೆ ದಾಂಗುಡಿ ಇಡುವ ಮೂಲಕ ಬೆಳೆ, ತೋಟದ ಬೆಳೆಗಳನ್ನು ನಾಶಪಡಿಸಿದ್ದು, ಗ್ರಾಮಸ್ಥರಲ್ಲಿ ಭಯ ಹುಟ್ಟು ಹಾಕಿದೆ.
ಅರಣ್ಯ ಪ್ರದೇಶ ವ್ಯಾಪ್ತಿಯ ಗಂಡುಗನಹಂಕಲು ಗ್ರಾಮ, ಗ್ರಾಮದಂಚಿನ ಅಡಕೆ ತೋಟ, ಜಮೀನುಗಳಲ್ಲಿ ನಿತ್ಯವೂ ಕಾಡಾನೆ ಬೆಳೆಗಳನ್ನು ನಾಶಪಡಿಸುತ್ತಿದೆ. ಈ ಪುಂಡಾನೆಯನ್ನು ಹಿಡಿಯುವಂತೆ ಸಾಕಷ್ಟು ಸಲ ಅರಣ್ಯ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಐದಾರು ತಿಂಗಳಿನಿಂದಲೂ ಕಾಡಾನೆ, ಚಿರತೆ, ಕರಡಿ ದಾಳಿಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯಿಂದ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಬರುತ್ತಿರುವುದು ಕಳೆದ 2 ದಶಕದಿಂದ ಹೆಚ್ಚಾಗಿದೆ. ಇಲಾಖೆ ಕಾಡಾನೆಗಳ ಹಾವಳಿ ತಪ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಕಾಡಾನೆ ದಾಳಿಯಿಂದಾಗಿ ಸುಮಾರು 45 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಕೆ ಮರಗಳು, ಮೆಕ್ಕೆಜೋಳ, ರಾಗಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಪ್ರತಿ ದಿನ ಸಂಜೆ 6 ಗಂಟೆ ನಂತರ ಗ್ರಾಮದಂಚಿನ ತೋಟ, ಜಮೀನು, ಗ್ರಾಮಗಳಿಗೆ ಕಾಡಾನೆ ದಾಳಿ ಮಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ಕಾಡಿನಲ್ಲಿ ದನ ಸಾಕಣೆ ಬೇಡ:
ಗ್ರಾಮದ ಮುಖಂಡರಾದ ರುದ್ರೇಶ, ಗೋವಿಂದ ನಾಯ್ಕ, ಪ್ರಕಾಶ, ಹನುಮಂತ ನಾಯ್ಕ, ಚನ್ನಬಸಪ್ಪ, ಉಮೇಶ, ಶಿವನಾಯ್ಕ, ಮುನಿರ್ ನಾಯ್ಕ ಸೇರಿದಂತೆ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಕಾಡಾನೆ ಹಿಡಿಯುವಂತೆ ಇಲಾಖೆಗೆ ಒತ್ತಾಯಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ಚನ್ನಗಿರಿ ವಲಯ ಅರಣ್ಯಾಧಿಕಾರಿ ಶ್ವೇತಾ ಅವರು ಕಾಡಾನೆಯನ್ನು ಸೆರೆಹಿಡಿಯುವ ಬಗ್ಗೆ ಅನುಮತಿ ಕೋರಿ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲದೇ, ಅಲ್ಲಿಯವರೆಗೆ ಗ್ರಾಮದಿಂದ ಆನೆಯನ್ನು ದೂರ ಓಡಿಸಲು, ಕಾಡಿನೊಳಗೆ ಕಳಿಸಲು ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗ್ರಾಮದ ಸುತ್ತಲೂ ಕಂದಕ ತೆಗೆಯುವ ಕಾಮಗಾರಿಯನ್ನೂ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
(ಕೋಟ್ಸ್) ಚನ್ನಗಿರಿ ತಾಲೂಕಿನಲ್ಲಿ ಆನೆಗಳ ಪುಂಡಾಟ, ಹಾವಳಿ ಹೆಚ್ಚುತ್ತಿದೆ. ತೋಟ, ಜಮೀನುಗಳಿಗೆ ದಾಳಿ ಮಾಡಿ, ಜನರ ಜೀವನ ತೆಗೆದುಕೊಂಡಿದ್ದ ಮೂರು ಕಾಡಾನೆಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಿದ್ದರಿಂದ ಹರಸಾಹಸ ಮಾಡಿ, ಅವುಗಳನ್ನು ಹಿಡಿಯಲಾಗಿತ್ತು. ಆನೆ ಹಾವಳಿ ತಪ್ಪಿಸಲು ಕಂದಕ ಮಾಡಿಸಿದ್ದರೂ ಅದನ್ನೆಲ್ಲಾ ದಾಟಿಕೊಂಡು, ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಜನರು ತೀವ್ರ ಹೋರಾಟ ಮಾಡುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು, ಗ್ರಾಮಸ್ಥರಿಗೆ, ದನ-ಕರುಗಳಿಗೆ ರಕ್ಷಣೆ ನೀಡಬೇಕು. ಕಾಡಾನೆ ಹಿಡಿಯಬೇಕು.
- ಮಾಡಾಳ್ ಮಲ್ಲಿಕಾರ್ಜುನ, ಬಿಜೆಪಿ ಯುವ ಮುಖಂಡ- - -
-25ಕೆಡಿವಿಜಿ1, 2, 3.ಜೆಪಿಜಿ:ಚನ್ನಗಿರಿ ತಾಲೂಕಿನ ಗಂಡುಗನ ಹಂಕಲು ಗ್ರಾಮದ ಜಮೀನು, ತೋಟಗಳಿಗೆ ಕಾಡಾನೆ ನುಗ್ಗಿ ಅಡಕೆ ಮರಗಳ ನಾಶಪಡಿಸಿದ್ದನ್ನು ಖಂಡಿಸಿ, ಗ್ರಾಮಸ್ಥರು ಕುಟುಂಬ ಸಮೇತ ಅರಣ್ಯ ಇಲಾಖೆ ಕಚೇರಿ ಬಳಿ ಆಗಮಿಸಿ ಪುಂಡಾನೆ ಶೀಘ್ರ ಸೆರೆಹಿಡಿಯಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.