ಫಸಲ್‌ ಬಿಮಾದಲ್ಲಿ ಕೋಟ್ಯಂತರ ವಂಚನೆ, ನಾಲ್ವರ ಬಂಧನ

KannadaprabhaNewsNetwork |  
Published : Mar 22, 2026, 03:00 AM IST
ಸಿಕೆಬಿ-5 ತಾಲ್ಲೂಕಿನ ಸೇಠ್ ದಿನ್ನೆಯಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿ ಕೊಂಡಿರುವ ವಸತಿ ಹೀನರನ್ನು  ಶಾಸಕ ಪ್ರದೀಪ್ಈಶ್ವರ್  ಬೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು | Kannada Prabha

ಸಾರಾಂಶ

ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆಹಾನಿ ವೇಳೆ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಏಜೆಂಟರು, ವಿಮಾ ಕಂಪನಿ ನೌಕರರು, ಇಲಾಖೆಗಳ ನೌಕರರು ಸೇರಿಕೊಂಡು ಖೊಟ್ಟಿ ದಾಖಲೆ ಸೃಷ್ಟಿಸಿ ವಿಮೆ ಹಣ ಪಡೆದು ಸರ್ಕಾರಕ್ಕೆ ಸುಮಾರು ₹30 ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ವ್ಯವಸ್ಥಿತ ಜಾಲ ಮುಧೋಳ ತಾಲೂಕಿನಲ್ಲಿ ಸಕ್ರಿಯಾಗಿರುವುದನ್ನು ಪತ್ತೆ ಮಾಡಿರುವ ವಿಶೇಷ ತನಿಖಾ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ಉಳಿದ 9 ಜನರ ಪತ್ತೆಗೆ ಜಾಲ ಬೀಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆಹಾನಿ ವೇಳೆ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಏಜೆಂಟರು, ವಿಮಾ ಕಂಪನಿ ನೌಕರರು, ಇಲಾಖೆಗಳ ನೌಕರರು ಸೇರಿಕೊಂಡು ಖೊಟ್ಟಿ ದಾಖಲೆ ಸೃಷ್ಟಿಸಿ ವಿಮೆ ಹಣ ಪಡೆದು ಸರ್ಕಾರಕ್ಕೆ ಸುಮಾರು ₹30 ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ವ್ಯವಸ್ಥಿತ ಜಾಲ ಮುಧೋಳ ತಾಲೂಕಿನಲ್ಲಿ ಸಕ್ರಿಯಾಗಿರುವುದನ್ನು ಪತ್ತೆ ಮಾಡಿರುವ ವಿಶೇಷ ತನಿಖಾ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ಉಳಿದ 9 ಜನರ ಪತ್ತೆಗೆ ಜಾಲ ಬೀಸಲಾಗಿದೆ.

ಮುಧೋಳ ತಾಲೂಕಿನಲ್ಲಿ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೆ ₹30 ಕೋಟಿ ಹಾಗೂ 2025-26ನೇ ಸಾಲಿನಲ್ಲಿ ₹28.51 ಲಕ್ಷ ಸೇರಿ ಒಟ್ಟು ₹30.28 ಕೋಟಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಇದರಲ್ಲಿ ಜಮೀನಿಗೆ ಬೆಳೆಹಾನಿ ಸಮೀಕ್ಷೆ ನಡೆಸಿರುವ ವಿವಿಧ ಇಲಾಖೆ ನೌಕರರು, ಗ್ರಾಮಲೆಕ್ಕಾಧಿಕಾರಿ, ಇತರರು ಶಾಮೀಲಾಗಿರುವ ಶಂಕೆ ಇದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.

ಏನಿದು ಪ್ರಕರಣ...?:

68 ಗ್ರಾಮಗಳ ವ್ಯಾಪ್ತಿ ಹೊಂದಿರುವ ಮುಧೋಳ ತಾಲೂಕಿನಲ್ಲಿ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಬೆಳೆ ವಿಮೆ ಜಾರಿಯಲ್ಲಿದೆ. ಯೋಜನೆ ಪ್ರಕಾರ ಅಧಿಸೂಚಿತ ಬೆಳೆ ಬೆಳೆದ ಜನರು ಸರ್ಕಾರ ನಿಗದಿಪಡಿಸಿದ ವಿಮೆಯ ಕಂತನ್ನು ಪಿಕೆಪಿಎಸ್‌ ಬ್ಯಾಂಕ್‌ ಅಥವಾ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ್ ಒನ್‌ಗಳಲ್ಲಿ ತುಂಬಿ ಸ್ವೀಕೃತಿ ಪತ್ರ ಪಡೆಯಲಾಗುತ್ತದೆ. ರೈತರ ವಂತಿಕೆ ಜೊತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮಪಾಲನ್ನು ರೈತರ ಪರ ವಿಮಾ ಕಂತು ಭರಿಸುತ್ತವೆ.

ಆದರೆ ಇಲ್ಲಿ ಜಮೀನಿನಲ್ಲಿ ಅಧಿಸೂಚಿತ ಬೆಳೆ ಬೆಳೆಯದೇ ಇದ್ದರೂ ಅಥವಾ ಕಡಿಮೆ ಬೆಳೆದು ಹೆಚ್ಚು ಕ್ಷೇತ್ರದಲ್ಲಿ ಬೆಳೆ ಇದೆ ಎಂದು ತೋರಿಸಿ ವಿಮೆ ಕಂತು ತುಂಬಿ ಬಳಿಕ ವಿಮೆ ಕಂಪನಿಯ ಪರಿಶೀಲನೆ ಹಾಗೂ ಬೆಳೆ ಸಮೀಕ್ಷೆ ವೇಳೆ ಪ್ರಭಾವ ಬೀರಿ ನಿಗದಿತ ಜಮೀನಿನಲ್ಲಿ ಬೇರೆ ಬೆಳೆ ಇದ್ದರೂ ವಿಮೆ ಅಧಿಸೂಚಿತ ಬೆಳೆ ಬೆಳೆಯಲಾಗಿದೆ ಎಂದು ತೋರಿಸಿ ಹಾಗೂ ಕಡಿಮೆ ಬೆಳೆಹಾನಿ ಆಗಿದ್ದರೂ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಹಾನಿ ಆಗಿದೆ ಎಂದು ತೋರಿಸಿ ವಿಮಾ ಕಂಪನಿಯಿಂದ ಬೆಳೆವಿಮೆ ಕ್ಲೇಮ್‌ ಮಾಡಿ ವಿಮೆ ಹಣ ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕಲ್ಲಪ್ಪ ಹುಣಸಿಕಟ್ಟಿ, ಶ್ರೀನಿವಾಸ ಪಾಟೀಲ, ಕಲ್ಮೇಶ ಜುನ್ನೂರ, ಶ್ರೀನಿವಾಸ ಹುಣಸಿಕಟ್ಟಿ, ರಮೇಶ ಹುಣಸಿಕಟ್ಟಿ, ಪ್ರಶಾಂತ ಕೋಮಾರ, ಶ್ರೀಕಾಂತ ಹಲಗಲಿ ಹಾಗೂ ಮುಧೋಳ ತಾಲೂಕಿನ ಯುನಿವರ್ಸಲ್ ಸೊಂಪು ಬೆಳೆ ವಿಮಾ ಕಂಪನಿಯ ಅಧಿಕಾರಿಗಳಾದ ಯಶವಂತ, ರಾಕೇಶ, ಪ್ರಕಾಶ, ಅನೀಲ ಬೀಳಗಿ ವಿರುದ್ಧ ದೂರು ದಾಖಲಾಗಿತ್ತು. ಆರೋಪಿತರಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಯಲಾಗಿದ್ದು ಹೇಗೆ?

2025ರ ಅಕ್ಟೋಬರ್‌ 23ರಂದು ಮುಧೋಳ ತಾಲೂಕಿನ ಮೆಟಗುಡ್ಡ ಹಾಗೂ ಗುಲಗಾಲಜಂಬಗಿ ಗ್ರಾಮದ ರೈತರು ಬೆಳೆ ವಿಮೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರಿಗೆ ಆದೇಶಿಸಿದ್ದರು.

ಉಪ ವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಮುಧೋಳ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಿದ್ಧಲಿಂಗೇಶ ದೊಡಮನಿ ವಿಮಾ ಕಂಪನಿಯ ನಾಲ್ವರು ನೌಕರರು ಸೇರಿದಂತೆ ಒಟ್ಟು 11 ಜನರ ವಿರುದ್ಧ ಮಾ.10ರಂದು ಮುಧೋಳ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಹಾಗೂ ಯುನಿವರ್ಸಲ್ ಸೊಂಪು ಬೆಳೆ ವಿಮಾ ಕಂಪನಿಯ ಅಧಿಕಾರಿ, ಸಿಬ್ಬಂದಿ ಜಂಟಿ ಸಮೀಕ್ಷೆ ತಂಡ ರಚಿಸಿ, 2025ನೇ ಸಾಲಿನ ಮುಂಗಾರಿನಲ್ಲಿ ಮುಧೋಳ ತಾಲೂಕಿನ ಬೆಳೆ ವಿಮೆಗೆ ನೋಂದಾಯಿಸಿದ ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆ ತಾಕು ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು.

ಜಂಟಿ ತಪಾಸಣೆ ತಂಡ ಕ್ಷೇತ್ರ ಭೇಟಿ ಮಾಡಿ ನೀಡಿರುವ ವರದಿಯಲ್ಲಿ ತಾಲೂಕಿನ ಒಟ್ಟು 19 ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆಗೆ 2102 ಜನರು ಬೆಳೆ ವಿಮೆಗೆ ನೋಂದಾಯಿಸಿದ್ದು, ಈ ಪೈಕಿ ಕೇವಲ 144 ರೈತರ ಬೆಳೆವಿಮೆ ಪರಿಶೀಲನೆ ವೇಳೆ ಹೊಂದಾಣಿಕೆ ಆಗಿದೆ. 1628 ರೈತರ ಬೆಳೆವಿಮೆ, ಬೆಳೆ ಸಮೀಕ್ಷೆ ಮತ್ತು ಜಂಟಿ ಸಮೀಕ್ಷೆಯಲ್ಲಿ ಹೊಂದಾಣಿಕೆ ಆಗಿಲ್ಲ. 330 ರೈತರದ್ದು ಬೆಳೆವಿಮೆ ಮತ್ತು ಬೆಳೆ ಸಮೀಕ್ಷೆಯಲ್ಲಿ ಹೊಂದಾಣಿಕೆ ಕಂಡು ಬಂದಿದೆ. ಜಂಟಿ ಸಮೀಕ್ಷೆಯಲ್ಲಿ ಬೇರೆ ಬೆಳೆ ಇರುವುದು ಕಂಡು ಬಂದಿದೆ.

ಹೇಗೆ ವಂಚನೆ?:

ಆರೋಪಿಗಳ ವಿಚಾರಣೆ ವೇಳೆ ವಿಮಾ ಕಂಪನಿ ಏಜೆಂಟರು ರೈತರನ್ನು ಸಂಪರ್ಕಿಸಿ ಅವರ ಜಮೀನು ದಾಖಲೆಗಳು, ಪಾಸ್‌ಬುಕ್‌, ಆಧಾರ್‌ ಮಾಹಿತಿ ಸಂಗ್ರಹಿಸಿ ಪ್ರಿಮಿಯಂ ಹಣ ತುಂಬಿ ಬಳಿಕ ಸಮೀಕ್ಷೆ ವೇಳೆ ವಿವಿಧ ಹಂತದಲ್ಲಿ ಪ್ರಭಾವ ಬೀರಿ ಬೆಳೆವಿಮೆ ಮಂಜೂರಾಗುವಂತೆ ಮಾಡುತ್ತಿದ್ದರು. ಬಳಿಕ ಬಂದ ಹಣದಲ್ಲಿ ಶೇ.50ರಷ್ಟು ಕಮೀಷನ್‌ ಪಡೆದು ಎಲ್ಲರೂ ಹಂಚಿಕೊಳ್ಳುತ್ತಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಯಿ ಕಟ್ಟಿ ಜಾತ್ರೆಗೆ ಚಾಲನೆ
ಇಸ್ಲಾಂ ಅಥ೯ ಮಾಡಿಕೊಂಡರೆ ಶ್ರೇಷ್ಠ ಮಾನವ