₹18 ಲಕ್ಷ ಮೌಲ್ಯದ ಸ್ವತ್ತು ಜಪ್ತಿ । ಒಂಟಿ ವೃದ್ಧೆ ಮೇಲೆ ದಾಳಿ ಪ್ರಕರಣ
ಕನ್ನಡಪ್ರಭ ವಾರ್ತೆ ದಾವಣಗೆರೆಹಾಡಹಗಲೇ ಮನೆಗೆ ನುಗ್ಗಿ ಒಬ್ಬಂಟಿ ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ 180 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಸಾಮಾನು, 15 ಸಾವಿರ ರು. ನಗದು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿ, ವಿವಿಧ ಕಡೆ ಕಳ್ಳತನ, ಸುಲಿಗೆ, ದರೋಡೆ, ಕೊಲೆ ಇತರೆ ಒಟ್ಟು 10 ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಲಕ್ಷ ರು. ಮೌಲ್ಯದ 186 ಗ್ರಾಂ ಚಿನ್ನದ ಆಭರಣ, 475 ಗ್ರಾಂ ಚಿನ್ನದ ಬೆಳ್ಳಿ ಸಾಮಾನು, 5 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ತುಮಕೂರು ಜಿಲ್ಲೆ ಬೆಳ್ಳಾವಿ ಹೋಬಳಿ ಪಿ.ಗೊಲ್ಲಹಳ್ಳಿ ಗ್ರಾಮದ ವಾಸಿ ಜಿ.ಎಸ್.ನವೀನಕುಮಾರ ಅಲಿಯಾಸ್ ಅಣ್ಣಾ ಬಾಂಡ್ ನವೀನನನ್ನು (31) ಬಂಧಿಸಿದ್ದು, ಆತನ ವಿಚಾರಣೆಯಿಂದ ಉಳಿದ ಆರೋಪಿಗಳಾದ ದಾವಣಗೆರೆ ತಾ. ಅತ್ತಿಗೆರೆ ಗ್ರಾಮದ ವಾಸಿ ಎನ್.ಮಂಜಪ್ಪ ಅಲಿಯಾಸ್ ಅತ್ತಿಗೆರೆ ಮಂಜಪ್ಪ ಅಲಿಯಾಸ್ ಆವರಗೆರೆ ಮಂಜಪ್ಪ (60), ತುಮಕೂರು ಜಿಲ್ಲೆ ಶಿರಾ ತಾ. ಕೋಡಿ ಹತ್ತಿರದ ಹೊಸೂರು ಗ್ರಾಮದ ವಾಸಿ ಚಂದ್ರಪ್ಪ(54) ಹಾಗೂ ಬೆಂಗಳೂರು ಬಾಬು ಸಾ ಪಾಳ್ಯದ ಅರ್ಕಾವತಿ ಬಡಾವಣೆ ವಾಸಿ, ಹೊಟೆಲ್ ಕೆಲಸಗಾರ ಕೆ.ಸತೀಶ (38) ಬಂಧಿತ ಆರೋಪಿಗಳು.ಮಾ.21ರಂದು ಪಿರ್ಯಾದಿ ಎಸ್.ಶಿವಮೂರ್ತಿ ವಿದ್ಯಾನಗರ ಠಾಣೆಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ನಂತರ ಆಸ್ಪತ್ರೆಗೆ ತೆರಳಿ, ಗಾಯಾಳು ವೃದ್ಧೆಯಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ನಂತರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿತ್ತು.