ಕಾಪು : ಇಲ್ಲಿನ ಶಿರ್ವ ಸಮೀಪ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಕಳ್ಳತನ ಮಾಡಿದ್ದ 4 ಮಂದಿ ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿ ಜೈಲಿಗಟ್ಟಿದ್ದಾರೆ. ನಡಿಗುತ್ತು ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್ ಅವರು ಭಾನುವಾರ ಬೆಳಗ್ಗೆ ತಮ್ಮ 5 ದನಗಳನ್ನು ಮನೆಯ ಬಳಿ ಹುಲ್ಲು ಮೇಯಲು ಬಿಟ್ಟಿದ್ದರು. ಸ್ವಲ್ಪ ಹೊತ್ತಿನ ನಂತರ ಹೋಗಿ ನೋಡಿದಾಗ 5 ದನಗಳ ಪೈಕಿ 2 ವರ್ಷದ ಕಪ್ಪು ಬಣ್ಣದ ದನ ಕಾಣೆಯಾಗಿತ್ತು. ಪರಿಸರದಲ್ಲಿ ಹುಡುಕಾಡುವಾಗ ಟೆಂಪೋವೊಂದು ನಿಂತಿದ್ದು, ಅದರಲ್ಲಿ ತಮ್ಮ ಒಂದು ದನ ಮತ್ತು ಇನ್ನೊಂದು ದನಗಳ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹೇರಲಾಗಿತ್ತು. ಟೆಂಪೋ ಬಳಿ 4 ಜನರಿದ್ದು, ವಸಂತಿ ಅವರು ಟೆಂಪೋ ಬಳಿ ಬರುತಿದ್ದಂತೆ ಅವರು ಟೆಂಪೋ ಚಲಾಯಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವಸಂತಿ ಅವರು ಶಿರ್ವ ಠಾಣೆಗೆ ದೂರು ನೀಡಿದರು. ಈ ದನಕಳ್ಳರನ್ನು ಪತ್ತೆ ಮಾಡುವುದಕ್ಕೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ವೃತ್ತ ನಿರೀಕ್ಷಕ ಅಝಮತ್ ಆಲಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, 1ನೇ ಆರೋಪಿ ಕಳತ್ತೂರು ಗ್ರಾಮದ ಉಮ್ಮರಬ್ಬ (64) ನನ್ನು ಅದೇ ದಿನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ತಲೆಮರೆಸಿಕೊಂಡಿದ್ದ ಕಳತ್ತೂರು ಗ್ರಾಮದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57), ಮೊಹಮ್ಮದ್ ಆಸೀರ್ (24) ಅವರನ್ನು ಸೋಮವಾರ ಕಾಪುವಿನ ಕೊಪ್ಪಲಂಗಡಿ ಬಳಿ ವಾಹನ ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಕಳ್ಳತನ ಮಾಡಿದ್ದ ದನಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಎಸೈ ಮಂಜುನಾಥ ಮರಬದ, ಪಡುಬಿದ್ರಿ ಎಸೈ ಸಕ್ತಿವೇಲು ಇ, ಅನಿಲ್ ಕುಮಾರ್ ಟಿ ನಾಯ್ಕ್, ಹೆಬ್ರಿ ಎಸೈ ಲೊಹಿತ್ ಕುಮಾರ್ ಹಾಗೂ ಶಿರ್ವ, ಕಾಪು, ಪಡುಬಿದ್ರಿ ಠಾಣಾ ಸಿಬ್ಬಂದಿ ಮತ್ತು ಉಡುಪಿ ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.