ಮುತ್ತಿಗೆಪುರ ಗ್ರಾಮದಲ್ಲಿ ಘಟನೆ । ಕೆರೆಯ ಹೂಳಲ್ಲಿ ಸಿಲುಕಿ ಅವಘಡ । ರಜೆ ಕಳೆಯಲು ಬಂದಿದ್ದ ಕೂಲಿ ಕಾರ್ಮಿಕರ ಮಕ್ಕಳು
ಕನ್ನಡಪ್ರಭ ವಾರ್ತೆ ಆಲೂರುಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ಹೂಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಕದಾಳು ಗ್ರಾಮ ಪಂಚಾಯಿತಿ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಪೃಥ್ವಿರಾಜ್ (೧೪), ವಿಶ್ವಾಸ್ (೧೩), ಜೀವನ್ (೧೩) ಮತ್ತು ಸಾತ್ವಿಕ್ (೧೩) ಮೃತಪಟ್ಟ ದುರ್ದೈವಿ ಮಕ್ಕಳು. ಬೇಲೂರು ತಾಲೂಕು ಮದಗಟ್ಟ ಗ್ರಾಮದ ಸಾತ್ವಿಕ್ ರಜೆ ಹಿನ್ನೆಲೆಯಲ್ಲಿ ಮುತ್ತಿಗೆಪುರದ ಅಜ್ಜಿ ಮನೆಗೆ ಬಂದಿದ್ದರು. ಇವರ ತಂದೆ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದಾರೆ.ಎಲ್ಲ ಮಕ್ಕಳು ಕೂಲಿ ಕಾರ್ಮಿಕರ ಬಡ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. ವಿಶ್ವಾಸ್ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರ ಮಗ. ನಾಲ್ಕು ಪೋಷಕರಿಗೂ ಒಬ್ಬೊಬ್ಬರೆ ಗಂಡು ಮಕ್ಕಳಿದ್ದರು. ನಾಲ್ಕು ಕುಟುಂಬಗಳೂ ಈಗ ಗಂಡು ಮಕ್ಕಳಿಲ್ಲದೆ ಅನಾಥವಾಗಿವೆ.
ಐದು ಮಕ್ಕಳು ಕೆರೆಯಂಗಳದಲ್ಲಿ ಈಜಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಸಮೀಪದಲ್ಲಿದ್ದವರು, ಕೆರೆಗೆ ಇಳಿಯಬೇಡಿ ಎಂದು ಬೆದರಿಸಿ ಮಕ್ಕಳನ್ನು ದೂರಕ್ಕೆ ಕಳಿಸಿದ್ದರಿಂದ ಮಕ್ಕಳು ಮನೆಗೆ ತೆರಳಿದ್ದರು. ನಂತರದಲ್ಲಿ ಐವರು ಮಕ್ಕಳು ನೀರಿಗೆ ಇಳಿದಿದ್ದಾರೆ. ಒಬ್ಬರ ಹಿಂದೆ ಒಬ್ಬರು ನೀರಿಗೆ ಧುಮುಕಿದಾಗ ಮೇಲೇಳದಿದ್ದನ್ನು ಗಮನಿಸಿದ ಜೊತೆಯಲ್ಲಿದ್ದ ಚಿರಾಗ್ ಎಂಬ ಯುವಕ ನೀರಿಗೆ ಧುಮುಕದೆ ವಾಪಾಸು ಗ್ರಾಮಕ್ಕೆ ಹಿಂದಿರುಗಿ ಹೋಗಿ ವಿಷಯ ತಿಳಿಸಿದ್ದಾನೆ.ಎರಡು ಅಗ್ನಿಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ಕೆರೆಯಲ್ಲಿದ್ದ ಮೃತ ಬಾಲಕರ ಶವಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರ ಕುಟುಂಬಗಳ ಆಕ್ರಂದನವನ್ನು ತಡೆಯಲಾಗದೆ ಸ್ಥಳೀಯರು ದು:ಖದಲ್ಲಿ ಮುಳುಗಿದ್ದರು. ಮುತ್ತಿಗೆಪುರ ಗ್ರಾಮ ಸಂಪೂರ್ಣ ಶೋಕದಲ್ಲಿ ಮುಳುಗಿದೆ.
ಕೆರೆಯಲ್ಲಿ ಕೇವಲ ಒಂದು ಅಡಿ ನೀರಿತ್ತು. ಆದರೆ ಸುಮಾರು ೧೦ ಅಡಿ ಆಳದಷ್ಟು ಹೂಳು ತುಂಬಿತ್ತು. ಮಕ್ಕಳು ಕೆರೆಗೆ ಇಳಿದ ತಕ್ಷಣ ಹೂಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು. ಘಟನೆ ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದು, ಇಡೀ ವಾತಾವರಣ ಶೋಕದ ಮಡಿಲಲ್ಲಿ ಮುಳುಗಿತ್ತು.ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಉಪ ವಿಭಾಗಾಧಿಕಾರಿ ಶೃತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತ, ಡಿವೈಎಸ್ಪಿ ಪ್ರಮೋದ್ ಕುಮಾರ್, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ತಹಸೀಲ್ದಾರ್ ನಂದಕುಮಾರ್, ಎಸೈ ಜನಾಬಾಯಿ ಕಡಪಟ್ಟಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳನ್ನು ಸಂತೈಸಿದರು. ಸರ್ಕಾರದಿಂದ ದೊರಕುವ ಪರಿಹಾರವನ್ನು ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಇಂದು ಸಂಭವಿಸಿರುವ ಘಟನೆ ಅತ್ಯಂತ ಘೋರವಾದದ್ದು. ಮೃತಪಟ್ಟಿರುವ ಮಕ್ಕಳು ಪ.ಜಾತಿಗೆ ಸೇರಿರುವುದಲ್ಲದೆ ಶಾಲಾ ಮಕ್ಕಳಾಗಿದ್ದು, ಇಂದು ಸಂಭವಿಸಿರುವ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗರಿಷ್ಠ ೫ ಲಕ್ಷ ರು. ವರೆಗೆ ಪರಿಹಾರ ಕೊಡಲು ಅವಕಾಶವಿದೆ. ಯಾವುದೇ ಹೇಳಿಕೆಗಳ ಅಗತ್ಯವಿಲ್ಲ. ಅಧಿಕಾರಿಗಳು ಸುಮುಟೊ ಕೇಸ್ ದಾಖಲಿಸಿಕೊಂಡು ಪರಿಹಾರ ಕೊಡಲು ಅವಕಾಶವಿದೆ. ಕೂಡಲೇ ಕಾರ್ಯತತ್ಪರರಾಗಿ ಮೃತರ ಕುಟುಂಬಗಳಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.