ಅಂಗನವಾಡಿ ಮೇಲ್ಛಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯ

KannadaprabhaNewsNetwork |  
Published : Aug 15, 2026, 02:15 AM IST
ಶಾನ್ವಿ  | Kannada Prabha

ಸಾರಾಂಶ

ಶಾನ್ವಿ ಎಂಬ ಮಗುವಿಗೆ ಕುತ್ತಿಗೆ ಸಮೀಪ ಗಾಯವಾಗಿದೆ. ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಆಸ್ಪತ್ರೆಯ ವೈದ್ಯರು ಯಾವುದೇ ತೊಂದರೆಯಿಲ್ಲವೆಂದು ತಿಳಿಸಿದರು.

ದೊಡ್ಡಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ । ನಿರ್ಮಿಸಿದ್ದ 10 ವರ್ಷದಲ್ಲೇ ಕುಸಿದ ಮೇಲ್ಛಾವಣಿ । ಪೋಷಕರ ಆಕ್ರೋಶ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 30 ವರ್ಷ ಹಳೆಯದಾದ ಅಂಗನವಾಡಿ ಕಟ್ಟಡವು ಶಿಥಿಲಗೊಂಡಿದ್ದು, ಅ ಕಟ್ಟಡದಲ್ಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮೇಲ್ಛಾವಣಿಯ ಸಿಮೆಂಟ್ ಗಾರೆ ಮಕ್ಕಳ ಮೇಲೆ ಕುಸಿದು 4 ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಶಾನ್ವಿ ಎಂಬ ಮಗುವಿನ ಕುತ್ತಿಗೆಗೆ ಬಲವಾದ ಗಾಯವಾಗಿದ್ದು ಉಳಿದಂತೆ ಜೀವಿಕಾ, ರಿತಿಕ್ಷಾ, ಶಾನ್ವಿ, ದಿಯಾ ಸೇರಿದಂತೆ ಒಟ್ಟು ನಾಲ್ಕು ಮಕ್ಕಳು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಗಾಯಗೊಂಡರ ಪೈಕಿ ಓರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಶಿಶುಯೋಜನಾಧಿಕಾರಿ ವೆಂಕಟೇಶ್‌ರೆಡ್ಡಿ ಭೇಟಿ ನೀಡಿ ಮಾತನಾಡಿ, ಘಟನೆ ವಿವರ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದ್ದು, ಶಾನ್ವಿ ಎಂಬ ಮಗುವಿಗೆ ಕುತ್ತಿಗೆ ಸಮೀಪ ಗಾಯವಾಗಿದೆ. ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಆಸ್ಪತ್ರೆಯ ವೈದ್ಯರು ಯಾವುದೇ ತೊಂದರೆಯಿಲ್ಲವೆಂದು ತಿಳಿಸಿದ ನಂತರ ಮಗುವನ್ನು ಊರಿಗೆ ಕರೆತರಲಾಗಿದೆ ಎಂದರು.

ಗಾಯಗೊಂಡಿರುವ ಪ್ರತಿಯೊಂದು ಮಗುವಿನ ಮನೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿ ಮಕ್ಕಳಿಗೆ ಏನಾದರೂ ತೊಂದರೆ ಕಂಡುಬಂದಲ್ಲಿ ತಕ್ಷಣವೇ ನಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದು ಬೇರೊಂದು ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುವುದು ಎಂದರು.

ಗಾಯಗೊಂಡ ಮಕ್ಕಳನ್ನು ತಕ್ಷಣವೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮಕ್ಕಳನ್ನು ತಾಲೂಕಿನ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ ಎಂದರು.

ಸಿಡಿಪಿಒ ಮಹೇಶ್ ಮಾತನಾಡಿ: ಶಿಥಿಲಗೊಂಡಿರುವ ಕಟ್ಟಡಕ್ಕೆ ಬದಲಾಗಿ ಖಾಸಗಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಅಂಗನವಾಡಿ ಕೇಂದ್ರ ನಡೆಸುವಂತೆ ತಿಳಿಸಲಾಗಿದೆ ಎಂದರು.

ಅಧಿಕಾರಿಗಳ ನಿರ್ಲಕ್ಷ್ಯ ಅಂಗನವಾಡಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವ ಬಗ್ಗೆ ಸ್ಥಳೀಯರು ಹಾಗೂ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಟಾಚಾರಕ್ಕೆ ಹೋಗಿದ್ದರೇ ವಿನಃಹ ಪರ್ಯಾಯ ಕಟ್ಟಡ ವ್ಯವಸ್ಥೆ ಮಾಡಿರಲಿಲ್ಲವೆಂದು ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರನ ನಿರ್ಲಕ್ಷ್ಯ:

10 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡವು ಶಿಥಿಲ ವ್ಯವಸ್ಥೆಗೆ ತಲುಪಿದ್ದು ಕಟ್ಟಡ ನಿರ್ಮಾಣಗೊಂಡು ಕೇವಲ 10 ವರ್ಷದಲ್ಲೇ ಹೊಸ ಅಂಗನವಾಡಿ ಕಟ್ಟಡ ಶಿಥಿಲಗೊಂಡಿರುವ ನೋಡಿದರೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆಯೇ ಎಂಬ ಸಂಶಯ ಮೂಡುತ್ತಿದೆ.

ಕಟ್ಟಡಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಕಿ ಮತ್ತು ಅಂಗನವಾಡಿ ಶಿಕ್ಷಕಿ ಗಮನ ಹರಿಸಬೇಕಾಗಿತ್ತು. ಘಟನಾ ಸ್ಥಳಕ್ಕೆ ಸಿಡಿಪಿಒ ಮಹೇಶ್ ಭೇಟಿ ನೀಡಿದಾಗ ಸ್ಥಳೀಯರು ಮತ್ತು ಪೋಷಕರು ತರಾಟೆಗೆ ತೆಗೆದುಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅನಾಹುತ ನಡೆದಿದೆ ಎಂದು ಆರೋಪಿಸಿದ್ದಾರೆ.

ಪೋಷಕರಾದ ಕನಕರಾಜು ಮಾತನಾಡಿ, ಅಂಗನವಾಡಿ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಶಿಕ್ಷಕಿ ಗಮನ ಹರಿಸದಿರುವುದು ನೋವಿನ ಸಂಗತಿ. ಕೇವಲ ಹಣಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹೊರತು ಅಂಗನವಾಡಿಯಲ್ಲಿ ಕಲಿಯುತ್ತಿರುವ 12 ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿದಲ್ಲಿ ಮಾತ್ರ ಇಂತಹ ದುರ್ಘಟನೆಗಳಿಗೆ ಕಡಿವಾಣ ಹಾಕಬಹುದಾಗಿದೆಯೆಂದರು.

ಚಿತ್ರಶೀರ್ಷಿಕೆ1: ಶಾನ್ವಿ ಜತೆ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಚಿತ್ರ.

ಚಿತ್ರಶೀರ್ಷಿಕೆ2: ಕುತ್ತಿಗೆಗೆ ಗಾಯಗೊಂಡಿರುವ ಶಾನ್ವಿ ಚಿತ್ರ.

ಚಿತ್ರಶೀರ್ಷಿಕೆ3: ಜಿಲ್ಲಾ ಶಿಶುಯೋಜನಾಧಿಕಾರಿ ವೆಂಕಟೇಶ್ ರೆಡ್ಡಿ, ತಾಲ್ಲೂಕು ಶಿಶುಯೋಜನಾಧಿಕಾರಿ ಮಹೇಶ್, ಮೇಲ್ವಿಚಾರಕಿ ಶಾಂತಮ್ಮ ಗಾಯಗೊಂಡಿರುವ ಶಾನ್ವಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಹಾರ ವಿತರಣೆಯಲ್ಲಿ ಲೋಪ ಕಂಡರೆ ಶಿಸ್ತು ಕ್ರಮ
ಪಿಯುಸಿ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ: ಬಸವರಮಾನಂದ ಸ್ವಾಮೀಜಿ