ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮಹಿಳೆ ಮೇಲೆ ಹಲ್ಲೆ ನಡೆಸಿ ಅವರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಕಿತ್ತೂರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯ ಎಸಗಿದ ಮಲ್ಲಾಪುರ ಪಿಜಿಯ ಮಾರುತಿ ಅಪ್ಪಯ್ಯ ಡಂಗಿ(36), ಮುರಗೋಡ ಗ್ರಾಮದ ಸಚಿನ್ ಪುಂಡಲೀಕ ಚೌಡಕ್ಕನವರ(20), ಧೂಪದಾಳ ಗ್ರಾಮದ ಪ್ರಹ್ಲಾದ ಕಲಂದರ ಮಹಿಲಾಂದೆ(20), ಓರ್ವ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕನನ್ನು ಬಂಧಿಸಿದ್ದಾರೆ.ನ.29ರಂದು ಬಸಾಪೂರ ಗ್ರಾಮದ 72 ವರ್ಷದ ಸೀತವ್ವ ಪಾಟೀಲ ಎಂಬುವರು ಕಿತ್ತೂರಿನ ಹೊಂಡದ ಬಸವಣ್ಣ ದೇವಸ್ಥಾನದ ಬಳಿ ತೆರಳುತ್ತಿದ್ದರು. ಆಗ ಇಬ್ಬರು ಯುವಕರು ಬಿಳಿ ಬಣ್ಣದ ಬೈಕ್ ಮೇಲೆ ಬಂದು ಮಹಾದೇವ ಗುಡಿ ಎಲ್ಲಿ ಎಂದು ಕೇಳುವ ನೆಪದಲ್ಲಿ ಕೊರಳಲ್ಲಿದ್ದ 12 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರಿಂದ ಒಟ್ಟು ₹ 10.10 ಲಕ್ಷ ಮೌಲ್ಯದ 101 ಗ್ರಾಂ ಚಿನ್ನಾಭರಣ ಹಾಗೂ ₹ 1 ಲಕ್ಷ ಮೌಲ್ಯದ ಬೈಕ್ ಸೇರಿ ಒಟ್ಟು ₹ 11.10 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ ಕಿತ್ತೂರು, ಬೈಲಹೊಂಗಲ, ಹಿರೇಬಾಗೇವಾಡಿ, ಗರಗ, ಸಂಕೇಶ್ವರ ಪೊಲೀಸ್ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ.ಈ ಬಗ್ಗೆ ಉಪವಿಭಾಗದ ಕಚೇರಿಯಲ್ಲಿ ಮಾತನಾಡಿದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಸಾರ್ವಜನಿಕರು ತಮ್ಮ ಬಂಗಾರದ ಆಭರಣಗಳ ಬಗ್ಗೆ ಜಾಗರೂಕರಾಗಿರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಸಿಪಿಐಗಳಾದ ಪ್ರಮೋದ ಯಲಿಗಾರ, ಶಿವಾನಂದ ಗುಡಗನಟ್ಟಿ, ಪ್ರವೀಣ ಗಂಗೋಳ, ಪಿಎಸ್ಐಗಳಾದ ಗುರುರಾಜ ಕಲಬುರ್ಗಿ, ಚಾಂದಬಿ ಗಂಗಾವತಿ, ಪೇದೆಗಳಾದ ಚೇತನ ಬುದ್ನಿ, ಮಲ್ಲಪ್ಪ ಗಿಡಗೇರಿ, ಎಸ್.ಎ.ದಪೇದಾರ, ಎ.ಎಂ.ಚೀಕ್ಕೇರಿ, ಎನ್.ಆರ್.ಗಳಗಿ, ಆರ್.ಎಸ್.ಶೀಲಿ, ಎಂ.ಬಿ.ಕಂಬಾರ, ಎಸ್.ಬಿ.ಹುಣಶೀಕಟ್ಟಿ, ಐ.ಎಂ.ನನ್ನೇಖಾನ, ಎಸ್.ಆರ್.ಪಾಟೀಲ, ಎಂ.ಸಿ.ಇಟಗಿ, ಶಿವಾನಂದ ದೇಸಾಯಿ, ಅನಿಲ ಗಡಿನಾಯ್ಕರ, ಎಚ್.ಆರ್.ನ್ಯಾಮಗೌಡ, ಸಚಿನ ಪಾಟೀಲ, ವಿನೋದ ಠಕ್ಕಣ್ಣವರ, ಶಕೀಲ ಶೇಖ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. ತಂಡವನ್ನು ಎಸ್ಪಿ ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್.ಪಿ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ.