ಭಾರಿ ಮಳೆಯಿಂದ ಮಾದಪ್ಪನ ಬೆಟ್ಟದಲ್ಲಿ 4 ತಾಸು ಸಂಚಾರ ದಟ್ಟಣೆ

KannadaprabhaNewsNetwork | Published : Dec 3, 2024 12:33 AM

ಸಾರಾಂಶ

ಹನೂರಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಸಂಚಾರ ದಟ್ಟಣೆಯಿಂದಾಗಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಭಕ್ತರು ಪರದಾಡಿದ ಘಟನೆ ಜರುಗಿದೆ. ಸೋಮವಾರ ನಸುಕಿನ ಜಾವ 4.30ಕ್ಕೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ದಟ್ಟಣೆ ಉಂಟಾಗಿ ವಿವಿಧೆಡೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡಿದ ಪ್ರಸಂಗ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಮಲೆಮಾದೇಶ್ವರ ಬೆಟ್ಟದಲ್ಲಿ ಸಂಚಾರ ದಟ್ಟಣೆಯಿಂದಾಗಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಭಕ್ತರು ಪರದಾಡಿದ ಘಟನೆ ಜರುಗಿದೆ.

ಕೋಟ್ಯಂತರ ಭಕ್ತರ ಆರಾಧ್ಯ ದೈವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರನ ಸನ್ನಿಧಿಗೆ ಜಾತ್ರೆ, ವಿಶೇಷ ಹುಣ್ಣಿಮೆ, ಅಮಾವಾಸ್ಯೆ ದಿನಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ಹೋಗುವ ರಸ್ತೆಯಲ್ಲಿ ಗಿಡಮರಗಳು ಹಾಗೂ ಬಿದಿರಿನ ಬುಡಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸೋಮವಾರ ನಸುಕಿನ ಜಾವ 4.30ಕ್ಕೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ದಟ್ಟಣೆ ಉಂಟಾಗಿ ವಿವಿಧೆಡೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡಿದ ಪ್ರಸಂಗ ಜರುಗಿತು.

ರಕ್ಷಣೆಗೆ ಧಾವಿಸಿದ ಪೊಲೀಸರು:

ತಾಳುಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೆ ಆನೆ ತಲೆದಿಂಬ ಕೊಂಬುಡಿಕ್ಕಿ ಗ್ರಾಮಕ್ಕೆ ತೆರಳುವ ರಸ್ತೆ ಸೇರಿದಂತೆ ಆನೆ ಹೊಲ ವಿವಿಧೆಡೆ ರಸ್ತೆಯಲ್ಲಿ ಭಾರಿ ಗಾತ್ರದ ಮರಗಳು ಸೇರಿದಂತೆ ಬಿದಿರಿನ ಬುಡಗಳು ಸಹ ರಸ್ತೆಗೆ ಅಡ್ಡಲಾಗಿ ಕುಸಿದು ಸಂಚಾರ ದಟ್ಟಣೆ ಉಂಟಾಗಿರುವ ಮಾಹಿತಿ ತಿಳಿದು ಮಹದೇಶ್ವರ ಬೆಟ್ಟದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್, ಸಿಬ್ಬಂದಿಯೊಡನೆ ಧಾವಿಸಿ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಗಿಡಮರಗಳನ್ನು ತೆರವುಗೊಳಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ.

ಇದರಿಂದಾಗಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಈ ರಸ್ತೆಯಲ್ಲಿ ಜಾತ್ರೆ ವಿಶೇಷ ಮಳೆ ಸಂದರ್ಭಗಳಲ್ಲಿ ಅರಣ್ಯ ಪ್ರದೇಶದ ಒಳಗಡೆ ಇರುವ ರಸ್ತೆಯಲ್ಲಿ ಗಿಡಮರಗಳು ಮಣ್ಣು ಕುಸಿದು ಬಿದಿರು ಬುಡಗಳು ಸಹ ರಸ್ತೆಗೆ ಅಡ್ಡಲಾಗಿ ಬೀಳುತ್ತಿರುವುದು ಸಂಚಾರಕ್ಕೆ ತೊಡಕಾಗಿರುವ ಗಿಡಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾದಪ್ಪನ ಭಕ್ತಾದಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾವಾಸ್ಯೆ ಪೂಜೆಗೆ ಭಕ್ತ ಸಮೂಹ:

ರಾಜ್ಯದ ನಾನಾ ಭಾಗಗಳಿಂದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಅಪಾರ ಸಂಖ್ಯೆಯ ಭಕ್ತಾದಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ಪೂಜೆಗೆ ಬಂದಿದ್ದರು. ಅಲ್ಲದೆ ಕಾರ್ತಿಕ ಮಾಸ ಮುಕ್ತಾಯಗೊಂಡು ಧನುರ್ಮಾಸ ಪೂಜೆ ಪ್ರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಅಮಾವಾಸ್ಯೆ ಪೂಜೆಗೆ ನಿರೀಕ್ಷೆಗೆ ಮೀರಿ ಬರುತ್ತಿರುವ ಭಕ್ತಾದಿಗಳು ಹಿಂತಿರುಗುವ ವೇಳೆ ಮಳೆ ಆರಂಭವಾಗಿದೆ. ಭಾನುವಾರ ಬೆಳಿಗ್ಗೆಯಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಮಲೆಮಹದೇಶ್ವರ ಬೆಟ್ಟದಿಂದ ವಿವಿಧೆಡೆ ತೆರಳಲು ಮತ್ತು ವಿವಿಧೆಡೆಯಿಂದ ಮಾದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಬರುತ್ತಿರುವುದರಿಂದ ಸಂಚಾರ ದಟ್ಟಣೆ ಕಿರಿಕಿರಿ ಉಂಟಾಗಿದೆ. ಮಳೆ, ಚಳಿಯ ನಡುವೆ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾಗುವ ಮೂಲಕ ಭಕ್ತರು, ಪ್ರಯಾಣಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

Share this article