ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಯಾಗರಾಜ್‌ನ ಮಹಾಕುಂಭ ಮೇಳಕ್ಕೆತೆರಳುತ್ತಿದ್ದ ಬೆಳಗಾವಿ ಯಾತ್ರಾರ್ಥಿಗಳ ಮಿನಿ ಬಸ್, ದ್ವಿಚಕ್ರ ವಾಹನ ಮತ್ತು ಟ್ಯಾಂಕರ್ ನಡುವೆ ಮಧ್ಯಪ್ರದೇಶದ ಇಂದೋರ್ ಬಳಿಯ ಮಾನಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ನಾಲ್ವರು ಸೇರಿದಂತೆ 6 ಜನರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಬೆಳಗಾವಿಯ ನಾಲ್ವರು ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಬೆಳಗಾವಿ ಬಸವನ ಗಲ್ಲಿ ನಿವಾಸಿ ಹಾಗೂ ಚಾಲಕ ಸಾಗರ ಶಹಾಪುರಕರ (55), ಗಣೇಶಪುರದ ಕ್ರಾಂತಿ ನಗರ ನಿವಾಸಿ ನೀತಾ ಬಡಮಂಜಿ (50), ಶಿವಾಜಿ ನಗರದ ಸಂಗೀತಾ ಮೇತ್ರಿ ಮತ್ತು ವಡಗಾವಿ ಜ್ಯೋತಿ ಖಾಂಡೇಕರ ಮೃತಪಟ್ಟವರು. ಮಧ್ಯಪ್ರದೇಶದ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.ಬೆಳಗಾವಿ ಯಾತ್ರಾರ್ಥಿಗಳು ಮಹಾಕಾಳೇಶ್ವರ ದೇವಸ್ಥಾನ ಮತ್ತು ಓಂಕಾರೇಶ್ವರ ದೇವಸ್ಥಾನದ ದರ್ಶನ ಪಡೆದು ಕುಂಭಮೇಳಕ್ಕೆ ತೆರಳುತ್ತಿದ್ದರು. ಇಂದೋರ ಜಿಲ್ಲೆಯ ಮಾನ್ಸುರ್ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಿನಿ ಬಸ್, ದ್ವಿಚಕ್ರವಾಹನ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಿನಿ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಪ್ರಯಾಣಿಕರ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆ ಬಿದ್ದಿದ್ದವು. ಅಪಘಾತ ನಡೆದ ಸ್ಥಳದಲ್ಲೇ ನಾಲ್ವರು ಅಸುನೀಗಿದರೆ, ಗಂಭೀರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂದೋರ್‌ನಲ್ಲಿ ಬೆಳಗಾವಿ ವಾಹನ ಅಪಾಘತಕ್ಕೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಮಧ್ಯಪ್ರದೇಶದ ಬಿಜೆಪಿ ಮುಖಂಡರೊಂದಿಗೆ ಸಂಪರ್ಕ ಸಾಧಿಸಿ, ಅಪಘಾತದಲ್ಲಿ ಗಾಯಗೊಂಡಿರುವವರ ಆರೈಕೆ ಮಾಡಿಸಿದರು. ಇಂದೋರ್ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ, ಗಾಯಾಳುಗಳನ್ನು ಸಂಪರ್ಕಿಸಿ ಅವರಿಗೆ ನೆರವು ನೀಡಿದ್ದಾರೆ. ಜತೆಗೆ ಊಟೋಪಚಾರದ ವ್ಯವಸ್ಥೆ ಕೂಡ ಮಾಡಿದ್ದಾರೆ ಎಂದು ಗಾಯಾಳುಗಳು ಅವರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.ಕಳೆದ ಜ.24ರಂದು ಬೆಳಗಾವಿಯ ಗಣೇಶಪುರದ ಕ್ರಾಂತಿ ನಗರದಿಂದ ಚಾಲಕ, ಕ್ಲೀನರ್ ಸೇರಿದಂತೆ ಒಟ್ಟು 20 ಜನರು ಮಿನಿ ಬಸ್ ಮೂಲಕ ಪ್ರವಾಸ ಕೈಗೊಂಡಿದ್ದರು. ಇನ್ನೇನು ಮಹಾಕುಂಭಮೇಳಕ್ಕೆ ಭೇಟಿ ನೀಡಿ ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದರು. ಆದರೆ, ಕುಂಭಮೇಳಕ್ಕೆ ತೆರಳುವ ಮುನ್ನವೇ ರಸ್ತೆ ಅಪಘಾತ ಸಂಭವಿಸಿ, ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಂದೋರನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವವರ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಬೆಳಗಾವಿಗೆ ಕರೆತರುವಂತೆ ಮೃತರು ಮತ್ತು ಗಾಯಾಳುಗಳು ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.