ಕುಷ್ಟಗಿ:
ತಾಲೂಕಿನ ಮೆಣೆದಾಳ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ 10ನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಕಾಣೆಯಾಗಿರುವ ಕುರಿತು ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಷ್ಟಗಿ ತಾಲೂಕಿನ ಎಂ. ರಾಂಪೂರ ಗ್ರಾಮದ ಮನು ದೇವಪ್ಪ ಕಡೆಮನಿ, ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಗುರುರಾಜ ಹನುಮಂತಪ್ಪ ಪರಿಯವರ, ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ನೀಲಕಂಠ ನಿಂಗಪ್ಪ ಹೊಸಮನಿ, ಯಲಬುರ್ಗಾದ ಪಟ್ಟಣದ ವಿಶ್ವ ಮಾರುತೆಪ್ಪ ಭಜಂತ್ರಿ ಅಪಹರಣಕ್ಕೊಳಗಾದ ಬಾಲಕರು.ಮಕ್ಕಳ ಪಾಲಕರ ಗಮನಕ್ಕೂ ತರುವ ಮೂಲಕ ಸುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ನಾಲ್ವರು ವಿದ್ಯಾರ್ಥಿಗಳನ್ನು ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿದ್ದು ಹುಡುಕಿ ಕೊಡುವಂತೆ ನಿಲಯ ಪಾಲಕ ಅಶೋಕ ಹಾಗೂ ಪ್ರಾಂಶುಪಾಲ ಕೊಟ್ರಪ್ಪ ದೂರು ಸಲ್ಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ತಾವರಗೇರಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಯುವಕನಿಗೆ ಮಾರಣಾಂತಿಕ ಹಲ್ಲೆ:
ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಸಿದ್ದು ಭೋವಿ ಎಂಬ ಯುವಕನ ಮೇಲೆ ೨೦ಕ್ಕೂ ಹೆಚ್ಚು ಯುವಕರ ತಂಡ ಮಾರಣಾಂತಿಕ ಹಲ್ಲೆ ಮಾಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಸಂಗಾಪುರ ಗ್ರಾಮದಲ್ಲಿ ಕಳೆದ ೬ ತಿಂಗಳ ಹಿಂದಷ್ಟೇ ಮರಂ ತುಂಬುವ ವಿಚಾರಕ್ಕೆ ಸಿದ್ದು ಭೋವಿ ಹಾಗೂ ಗಂಗಾವತಿ ಕೆಲ ಯುವಕರ ಜೊತೆ ವಾಗ್ವಾದವಾಗಿತ್ತು.ಈ ಪ್ರಕರಣದಲ್ಲಿ ಪೊಲೀಸರು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿದ್ದರು. ಆದರೆ ಇದೇ ದ್ವೇಷದಿಂದಾಗಿ ವಂಶಿ ಎಂಬ ವ್ಯಕ್ತಿ ೨೦ ಸಹಚರರೊಂದಿಗೆ ಸಿದ್ದು ಭೋವಿ ಮೇಲೆ ಹಲ್ಲೆ ನಡೆಸಿದ್ದಾನೆ.ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ. ಕಾರು ಹತ್ತಿಸಿ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ.ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಿದ್ದು ತೀವ್ರ ಅಸ್ವಸ್ಥನಾಗಿ ಬಿದ್ದ ಹಿನ್ನೆಲೆ ಅಲ್ಲಿಂದ ಯುವಕರ ಗುಂಪು ತೆರಳಿದ್ದಾರೆ. ನಂತರ ಗಾಯಾಳ ಸಿದ್ದು ಭೋವಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾನೆ.
ಈಗಾಗಲೇ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ಭೋವಿ ಸಮಾಜದ ಯುವಕನ ಮೇಲೆ ತೀವ್ರ ಹಲ್ಲೆ ನಡೆದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಚಿತ್ರದುರ್ಗದ ಭೋವಿ ಸಮಾಜದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿ ಭೇಟಿ ನೀಡಿ ಗಾಯಾಳುಗೆ ಆತ್ಮಸ್ಥೈರ್ಯ ತುಂಬಿದರಲ್ಲದೇ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.