ಎಫ್‌ಪಿಎಐ ಸಂಸ್ಥೆಯ ಆರೋಗ್ಯ ಸೇವೆ ಅನನ್ಯ: ಗಿರೀಶ

KannadaprabhaNewsNetwork | Published : Oct 22, 2024 12:06 AM

ಸಾರಾಂಶ

ಬೀದರ್ ತಾಲೂಕಿನ ಹೊಕ್ರಾಣಾ (ಬಿ) ಗ್ರಾಪಂ ಮಹಿಳೆಯರಿಗಾಗಿ ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬೀದರ್‌ ಶಾಖೆಯು ಹೊಕ್ರಾಣಾ (ಬಿ) ಗ್ರಾಪಂ ಇವರ ಸಹಕಾರದೊಂದಿಗೆ ಸೋಮವಾರ ಹೊಕ್ರಾಣಾ ಬಿ.ಗ್ರಾಪಂ ಮಹಿಳೆಯರಿಗಾಗಿ ಉಚಿತ ‘ಗರ್ಭಕೋಶ ಕೊರಳಿನ ಕ್ಯಾನ್ಸರ್’ ಕುರಿತು ಅರಿವು-ಮಾಹಿತಿ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಗಿರೀಶ ಕುಲಕರ್ಣಿ, ನಮ್ಮ ಗ್ರಾಮದ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಎಫ್‌ಪಿಎಐ ಸಂಸ್ಥೆಯು ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಮೆಚ್ಚುಗೆ ಕಾರ್ಯವಾಗಿದೆ ಎಂದು ಹೇಳಿದರು.

ಎಫ್‌ಪಿಎಐ ಸಂಸ್ಥೆಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಪೆಂಟಾರೆಡ್ಡಿ ಪಾಟೀಲ್ ಇವರ ಪುತ್ರ ಅರುಣ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ, ತಾಯಂದಿರ, ಮಕ್ಕಳ ಹಾಗೂ ಹದಿಹರೆಯದವರ ಆರೋಗ್ಯ ಮತ್ತು ಕುಟುಂಬ ಯೋಜನಾ ಸೇವೆಯಲ್ಲಿ ಎಫ್‌ಪಿಎಐ ಸಂಸ್ಥೆಯ ಆರೋಗ್ಯ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳೆಯರು ಆರೋಗ್ಯವಂತರಾಗಿರುವುದು ಬಹುಮುಖ್ಯ. ಆದ್ದರಿಂದ ಎಫ್‌ಪಿಎಐ ಸಂಸ್ಥೆ ಹಮ್ಮಿಕೊಂಡಿರುವ ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆಯ ತಪಾಸಣಾ ಶಿಬಿರದಲ್ಲಿ ಎಲ್ಲ ಮಹಿಳೆಯರು ಪಾಲ್ಗೊಂಡು ತಪಾಸಣೆ ಮಾಡಿಕೊಂಡು ತಮ್ಮ ಆರೋಗ್ಯದ ಕಾಳಜಿ ವಹಿಸಿಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ/ಮುಂಜಾಗೃತಿ ವಹಿಸದೆ ಇರುವುದರಿಂದ ವಿವಿಧ ರೀತಿಯ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ ಎಂದರು.

ವಿಶೇಷವಾಗಿ ಮಹಿಳೆಯರಲ್ಲಿ ಸ್ಥನ ಕ್ಯಾನ್ಸರ್ ಹಾಗೂ ಗರ್ಭಕೋಶ ಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು. ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ 13 ರಿಂದ 26 ವರ್ಷದೊಳಗಿನ ಯುವತಿಯರು HPV ಲಸಿಕೆ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ವಿಜಯಲಕ್ಷ್ಮೀ ಹುಡುಗೆ ನಿರೂಪಿಸಿ, ಸಂಸ್ಥೆಯು ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯ, ಗರ್ಭಕೋಶ ಕೊರಳಿನ ಹಾಗೂ ಎದೆಯ ಕ್ಯಾನ್ಸರ್ ತಪಾಸಣಾ ಸೇವೆಗಳನ್ನು ಉಚಿತವಾಗಿ ಒದಗಿಸುತ್ತಿದ್ದು, ಕಳೆದ 50 ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸೇವೆ ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು.

ಮನ್ನಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಪರಿವೀಕ್ಷಕರಾದ ಭೂಷಣ ಕೂಡ ಗರ್ಭಕೋಶ ಕೊರಳಿನ ಕ್ಯಾನ್ಸರ್ ರೋಗದ ಕುರಿತು ಹಾಗೂ ಕ್ಷಯರೋಗದ ಕುರಿತು ಮಾಹಿತಿ ನೀಡಿದರು.

ಹೊಕ್ರಾಣಾ ಗ್ರಾಪಂ ಪಿಡಿಒ ಮೀನಾಕ್ಷಿ ಪಾಟೀಲ್, ಸ್ವಾಗತಿಸಿದರು. ಆರೋಗ್ಯ ಅಧಿಕಾರಿ ಸ್ಯಾಂಡ್ಲಿ ವಂದಿಸಿದರು.

ಸಂಸ್ಥೆಯ ವೈದರಾದ ಡಾ.ಚಿನ್ನಮ್ಮ ಬಿರಾದಾರ ಉಪಸ್ಥಿತರಿದ್ದರು.

ನಂತರ ಗ್ರಾಮದ ಮಹಿಳೆಯರಿಗೆ ಗರ್ಭಕೋಶ, ಕೊರಳಿನ ಕ್ಯಾನ್ಸರ್ ತಪಾಸಣೆ ಮಾಡಲಾಯಿತು.

Share this article