ಫಾ.ಮುಲ್ಲರ್ ಆಸ್ಪತ್ರೆಯಲ್ಲಿ ವಿನೂತನ ಶೈಲಿಯ ಚಿಕಿತ್ಸೆಯಿಂದ ವೃದ್ಧ ಹೃದ್ರೋಗಿಗೆ ಜೀವದಾನ

KannadaprabhaNewsNetwork |  
Published : Aug 30, 2025, 01:01 AM IST
ಯಶಸ್ವಿ ಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡ. | Kannada Prabha

ಸಾರಾಂಶ

ಸಾವು ಬದುಕಿನ ಹೋರಾಟದಲ್ಲಿದ್ದ ಹೃದ್ರೋಗಿಯೊಬ್ಬರಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ವೈದ್ಯರ ತಂಡವು ಅಪರೂಪದ ಮತ್ತು ವಿನೂತನ ಶೈಲಿಯ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ.

ಮಂಗಳೂರು: ನಗರದ 64 ವರ್ಷ ವಯಸ್ಸಿನ, ಸಾವು ಬದುಕಿನ ಹೋರಾಟದಲ್ಲಿದ್ದ ಹೃದ್ರೋಗಿಯೊಬ್ಬರಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ವೈದ್ಯರ ತಂಡವು ಅಪರೂಪದ ಮತ್ತು ವಿನೂತನ ಶೈಲಿಯ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ.

ವೃದ್ಧ ರೋಗಿಯು ಮಧುಮೇಹ ಕಾಯಿಲೆ, ತೀವ್ರ ಹೃದಯ ಸಮಸ್ಯೆ, ತೀಕ್ಷ್ಣ ಎದೆ ನೋವು, ಗಂಭೀರ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಫಾ.ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ.ಎಚ್. ಪ್ರಭಾಕರ್ ಅವರನ್ನು ಸಲಹೆಗಾಗಿ ಭೇಟಿ ಮಾಡಿದ್ದರು. ವೈದ್ಯರು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಿದಾಗ ರೋಗಿಯು ತೀವ್ರ ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಹೃದಯದ ಮುಖ್ಯ ರಕ್ತ‌ನಾಳದಲ್ಲಿ ಬಿರುಕು ಬಿದ್ದು ರಕ್ತ ಸೋರಿಕೆಯಾಗಿ ದೇಹದ ಇತರ ಅಂಗಾಂಗಗಳಿಗೆ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತಿತ್ತು. ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂಬುದನ್ನು ವೈದ್ಯರು ಪತ್ತೆ ಮಾಡಿದರು. ರೋಗಿಗೆ ತೆರೆದ ಹೃದಯ ಶಸ್ತ್ರಚಿತ್ಸೆ ನರವೇರಿಸಿದರೆ ಜೀವಕ್ಕೆ ಮಾರಣಾಂತಿಕವಾಗುವ ಅಪಾಯ ಇತ್ತು.

ಡಾ.ಪ್ರಭಾಕರ್ ಅವರು ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ನುರಿತ ವೈದ್ಯಕೀಯ ತಂಡವನ್ನು ರಚಿಸಿ, ಗಂಭೀರ ಹೃದ್ರೋಗ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿದರು. ತುರ್ತು 3 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರ ‘ಅಯೋರ್ಟಿಕ್ ಸ್ಟಂಟ್ ಗ್ರಾಫ್ಟ್’ ಚಿಕಿತ್ಸೆಯನ್ನು ನೆರವೇರಿಸಿ ರಕ್ತನಾಳದ ಸೋರುವಿಕೆಯನ್ನು ತಡೆಗಟ್ಟಿ, ದೇಹದ ಇತರ ಅಂಗಾಂಗಗಳಿಗೆ ನಿಯಮಿತ ರಕ್ತ ಪರಿಚಲನೆಗೆ ಅನುವು ಮಾಡಿಕೊಟ್ಟರು. ರೋಗಿಯ ತೊಡೆಯಲ್ಲಿ ಸೂಕ್ಷ್ಮ ರಂದ್ರವನ್ನು ಕೊರೆದು ಅದರ ಮೂಲಕ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.

ಈ ಅಪಾಯಕಾರಿ ಮತ್ತು ಕ್ಲಿಷ್ಟಕರ ಚಿಕಿತ್ಸೆಯನ್ನು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿರ್ವಹಿಸಲಾಗಿದೆ ಎಂದು ಡಾ.ಎಚ್. ಪ್ರಭಾಕರ್ ಮಾಹಿತಿ ನೀಡಿದ್ದಾರೆ.

ಈ ಅಪರೂಪದ ಚಿಕಿತ್ಸೆಗೆ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ, ಡಾ. ಜೋಸ್ಟೋಲ್ ಪಿಂಟೊ, ಡಾ. ಚೇತನ್ ಆನಂದ್ ಮತ್ತು ಡಾ. ಅಶೋಕ್ ಮತ್ತು ಡಾ. ಆನಂದ್ ಕೆ.ಟಿ. ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತ್ತಿದ್ದಾರೆ.

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫೌಸ್ಟಿನ್ ಲ್ಯೂಕಸ್ ಲೋಬೊ ಅವರು, ಚಿಕಿತ್ಸೆಯನ್ನು ಯಶಸ್ವಿಯಾಗಿ ಆಸ್ಪತ್ರೆಯಲ್ಲಿ ನೆರವೇರಿಸಲಾಗಿದೆ ಎಂದು ನುಡಿದು, ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ