ಲಘು ರೈಲು ಸಾರಿಗೆಗೆ ಫ್ರಾನ್ಸ್‌ ಮೂಲದ ಕಂಪನಿ ಪ್ರಸ್ತಾವನೆ

KannadaprabhaNewsNetwork | Published : Jan 18, 2025 12:45 AM

ಸಾರಾಂಶ

ಅವಳಿ ನಗರದ ಮಧ್ಯದ 23 ಕಿಮೀ ವ್ಯಾಪ್ತಿಯಲ್ಲಿ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರ ಸಹಭಾಗಿತ್ವ ಮಾದರಿಯಲ್ಲಿ ಸ್ಥಾಪಿಸಲು ಫ್ರಾನ್ಸ್‌ ಮೂಲದ ಕಂಪನಿ ಅಧಿಕಾರಿಗಳು ಸದ್ಯ ಧಾರವಾಡಕ್ಕೆ ಬಂದಿದ್ದು, ಜನಸಂಖ್ಯೆ ಸೇರಿದಂತೆ ಪ್ರಯಾಣಿಕರ ಸಂಚಾರದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಧ್ಯೆ ಬಿಆರ್‌ಟಿಎಸ್‌ಗೆ ಪರ್ಯಾಯವಾಗಿ ಲಘು ರೈಲು ಸಾರಿಗೆ (ಎಲ್‌ಆರ್‌ಟಿ) ವ್ಯವಸ್ಥೆ ಕುರಿತಂತೆ ಫ್ರಾನ್ಸ್‌ ಮೂಲದ ಕಂಪನಿಯೊಂದು ಫೆಬ್ರುವರಿ ಅಂತ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಅವಳಿ ನಗರದ ಮಧ್ಯದ 23 ಕಿಮೀ ವ್ಯಾಪ್ತಿಯಲ್ಲಿ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರ ಸಹಭಾಗಿತ್ವ ಮಾದರಿಯಲ್ಲಿ ಸ್ಥಾಪಿಸಲು ಫ್ರಾನ್ಸ್‌ ಮೂಲದ ಕಂಪನಿ ಅಧಿಕಾರಿಗಳು ಸದ್ಯ ಧಾರವಾಡಕ್ಕೆ ಬಂದಿದ್ದು, ಜನಸಂಖ್ಯೆ ಸೇರಿದಂತೆ ಪ್ರಯಾಣಿಕರ ಸಂಚಾರದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ತದನಂತರ ಫೆಬ್ರುವರಿ ಅಂತ್ಯಕ್ಕೆ ಅವರು ನಮಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗುವುದು. ಈ ಯೋಜನೆಗೆ ಫ್ರಾನ್ಸ್‌ ಕಂಪನಿಯು ₹ 1000 ಕೋಟಿ ವೆಚ್ಚ ಮಾಡುತ್ತಿದ್ದು, ಮುಂದಿನ 25 ವರ್ಷಗಳ ಭವಿಷ್ಯ ಇಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಆರ್ಥಿಕವಾಗಿ ಲಾಭದಾಯಕ ಎನಿಸಿದರೆ ಮಾತ್ರ ಈ ಯೋಜನೆ ಜಾರಿ ಮಾಡಲಾಗುವುದು ಎಂದರು.

ಮುಂದಿನ ಸಾರಿಗೆ ಯೋಜನೆ ವರೆಗೆ ಸದ್ಯ ಇರುವ ಬಿಆರ್‌ಟಿಎಸ್‌ ಯೋಜನೆಯನ್ನು ಹೇಗೆ ಸುಧಾರಿಸಬೇಕು ಎಂಬುದರ ಕುರಿತು ಜ. 27ರಂದು ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ. ಇರುವ ವ್ಯವಸ್ಥೆಯನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದು, ಅವಳಿ ನಗರ ಜನತೆಗೆ ಸುಸೂತ್ರ ಪ್ರಯಾಣಕ್ಕೆ ಬೇಕಾದ ಬದಲಾವಣೆಯನ್ನು ಬಿಆರ್‌ಟಿಎಸ್‌ನಲ್ಲಿ ಮಾಡಲು ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.

ಧಾರವಾಡದಲ್ಲಿ ವರ್ತುಳ ರಸ್ತೆ ಕುರಿತು ಚರ್ಚೆ ನಡೆಯುತ್ತಿದೆ. ಇದರೊಂದಿಗೆ ಬರುವ ಬಜೆಟ್‌ನಲ್ಲಿ ಧಾರವಾಡಕ್ಕೆ ಅನೇಕ ಯೋಜನೆಗಳಿವೆ. ಅವುಗಳ ಬಗ್ಗೆ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಲಾಡ್‌ ಉತ್ತರಿಸಿದರು.

ಧಾರವಾಡ -ಅಳ್ನಾವರ ರಸ್ತೆ ಮಧ್ಯದ ರೈಲ್ವೆ ಮೇಲ್ಸೇತುವೆಯ ಕೆಲಗೇರಿ ಕಾಮಗಾರಿ ಮುಕ್ತಾಯವಾಗಿ ಸಂಚಾರ ಶುರುವಾಗಿದೆ. ಆದರೆ, ಕೋಗಿಲಗೆರೆ ಸೇತುವೆ ಕಾಮಗಾರಿ ಬಾಕಿ ಉಳಿದಿದೆ. ಈ ಕಾಮಗಾರಿಯನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ರಾಜ್ಯ ಸರ್ಕಾರದ ಪಾಲಿನ ಅನುದಾನ ನೀಡಿದ್ದೇವೆ. ಈ ಕಾಮಗಾರಿಯ ಟೆಂಡರ್‌ ಆಗಿದ್ದು, ವಿಳಂಬ ಆಗುತ್ತಿರುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಕೃಷಿ ವಿವಿ ವ್ಯಾಪ್ತಿಯ ಪ್ರದೇಶದಲ್ಲಿ ಏಕಾಏಕಿ ಸ್ಥಾಪನೆಯಾಗಿರುವ ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಕುಲಪತಿಗಳೇ ಸ್ಪಷ್ಟನೆ ನೀಡಬೇಕು. ಅವರು ಜಿಲ್ಲಾಡಳಿತವನ್ನು ಹೊಣೆ ಮಾಡುವುದು ಬೇಡ. ಆರಂಭದಲ್ಲಿ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಬೇಕಿತ್ತು. ಅಲ್ಲದೇ, ಸರ್ಕಾರಕ್ಕೆ ಅವರು ಬರೆದ ಪತ್ರದಲ್ಲಿ, ದೇವಸ್ಥಾನ ನಿರ್ಮಾಣಕ್ಕಿಂತ ಅದಕ್ಕೆ ದಾರಿ ಯಾವುದು ಎಂದು ಪ್ರಶ್ನಿಸಿದ್ದು ತಪ್ಪು ಎಂದರು.

ಸುದ್ದಿಗೋಷ್ಠಿಯಲ್ಲಿ ಕೈ ಮುಖಂಡರಾದ ತವನಪ್ಪ ಅಷ್ಟಗಿ, ಅನಿಲಕುಮಾರ ಪಾಟೀಲ, ಸುರೇಶಗೌಡರ, ಮಲ್ಲನಗೌಡ ಪಾಟೀಲ ಇದ್ದರು.

Share this article