ಕಳಪೆ ಕಳೆನಾಶಕ ವಿತರಿಸಿ ವಂಚನೆ ರಸ್ತೆ ತಡೆದು ರೈತರ ಪ್ರತಿಭಟನೆ

KannadaprabhaNewsNetwork |  
Published : Jul 16, 2024, 12:32 AM IST
ಪಾಳಾ ಹೋಬಳಿ ಕೋಡಂಬಿ ಭಾಗದ ರೈತರು ಸೋಮವಾರ ಶಿರಸಿ- ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮುಂಡಗೋಡ ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಕುಲಕರ್ಣಿ ಸ್ಥಳಕ್ಕಾಗಮಿಸಿ ಜು. ೧೬ರ ಬೆಳಗ್ಗೆ ಔಷಧ ಕಂಪನಿಯವರನ್ನು ಕೋಡಂಬಿ ಗ್ರಾಮಕ್ಕೆ ಕರೆಸಿ ಜಿಲ್ಲಾ ಜಂಟಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಂಡಗೋಡ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಲಿಖಿತವಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಮುಂಡಗೋಡ: ಕಳಪೆ ಕಳೆನಾಶಕವನ್ನು ನೀಡಿ ರೈತರನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಪಾಳಾ ಹೋಬಳಿ ಕೋಡಂಬಿ ಭಾಗದ ರೈತರು ಸೋಮವಾರ ತಾಲೂಕಿನ ಪಾಳಾ ಕ್ರಾಸ್‌ನ ಶಿರಸಿ- ಹುಬ್ಬಳ್ಳಿ ರಸ್ತೆತಡೆದು ಔಷಧ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಕಳೆನಾಶಕ ಖರೀದಿಸಿ ಭತ್ತದ ಗದ್ದೆಗೆ ಸಿಂಪಡಿಸಿ ೧ ತಿಂಗಳು ಕಳೆದರೂ ಗದ್ದೆಯಲ್ಲಿ ಕಳೆ ನಾಶವಾಗಿಲ್ಲ. ಬದಲಾಗಿ ಗದ್ದೆಯಲ್ಲಿ ಬೆಳೆದ ಭತ್ತದ ಬೆಳೆ ಹಾನಿಯಾಗಿದೆ ಎಂದು ದೂರಿದ ಪ್ರತಿಭಟನಾಕಾರರು, ೧ ತಿಂಗಳ ಹಿಂದೆ ಪಾಳಾ ಹಾಗೂ ಮಳಗಿ ಗ್ರಾಮದ ಔಷಧ ಅಂಗಡಿಗಳಲ್ಲಿ ಸುಮಿ ಗೋಲ್ಡ್, ಗ್ರೀನ್ ಲೇಬಲ್ ಮತ್ತು ರೈಸ್ ಸ್ಟಾರ್ ಸೇರಿದಂತೆ ಈ ಮೂರು ಕಂಪನಿಗಳ ಕಳೆನಾಶಕ ಔಷಧಗಳನ್ನು ಖರೀದಿಸಿ ಗದ್ದೆಗಳಲ್ಲಿ ಸಿಂಪಡಿಸಲಾಗಿತ್ತು. ಈವರೆಗೂ ಭತ್ತದ ಗದ್ದೆಯಲ್ಲಿ ಹುಲ್ಲು ನಾಶವಾಗಿಲ್ಲ. ಈ ಬಗ್ಗೆ ಇತ್ತೀಚೆಗೆ ಕೃಷಿ ಇಲಾಖೆ ಅಧಿಕಾರಿಗಳು ಮೂರು ಔಷಧ ಕಂಪನಿ ಸಿಬ್ಬಂದಿಯನ್ನು ಕೋಡಂಬಿ ಗ್ರಾಮಕ್ಕೆ ಕರೆಸಿ ರೈತರ ಸಮ್ಮುಖದಲ್ಲಿ ಸಭೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದ್ದರು. ಈವರೆಗೂ ಕಂಪನಿಯವರು ಸ್ಪಂದಿಸಿಲ್ಲ. ಹಾಗಾಗಿ ತಹಸೀಲ್ದಾರ್ ಮತ್ತು ಜಿಲ್ಲಾ ಕೃಷಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪೊಲೀಸರು ರೈತರನ್ನು ಸಮಾಧಾನಪಡಿಸಲೆತ್ನಿಸಿದರೂ ಇದಕ್ಕೆ ಜಗ್ಗದ ಪ್ರತಿಭಟನಾಕಾರರು, ಸಮಸ್ಯೆ ಪರಿಹಾರವಾಗುವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಬಳಿಕ ಮುಂಡಗೋಡ ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಕುಲಕರ್ಣಿ ಸ್ಥಳಕ್ಕಾಗಮಿಸಿ ಜು. ೧೬ರ ಬೆಳಗ್ಗೆ ಔಷಧ ಕಂಪನಿಯವರನ್ನು ಕೋಡಂಬಿ ಗ್ರಾಮಕ್ಕೆ ಕರೆಸಿ ಜಿಲ್ಲಾ ಜಂಟಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಂಡಗೋಡ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಲಿಖಿತವಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಸತೀಶ ನಾಯ್ಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ರೈತ ಮುಖಂಡ ಹಾಲಪ್ಪ ಕೊಡಣ್ಣನವರ, ಮಹೇಶ ಹೊಸಕೊಪ್ಪ, ಕೃಷ್ಣ ಕ್ಯಾರಕಟ್ಟಿ, ಬಸವಂತ ಪೂಜಾರ, ಶಂಕ್ರಪ್ಪ ಗಾಣಿಗ, ಯಮನಪ್ಪ ನಾಯ್ಕ, ಮರ್ದಾನಸಾಬ ಜನಗೇರಿ ಸೇರಿದಂತೆ ಹಲವಾರು ರೈತರು ಇದ್ದರು.ರಸ್ತೆ ಸಂಚಾರಕ್ಕೆ ಅಡಚಣೆ

ಸುಮಾರು ೩ ಗಂಟೆಗಳ ಕಾಲ ರಸ್ತೆತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಬಸ್, ಕಾರು ಮುಂತಾದ ವಾಹನಗಳು ಮುಂದೆ ಹೋಗಲಾಗದೆ ಸಾಲು ಸಾಲಾಗಿ ಇಲ್ಲಿಯೇ ನಿಲ್ಲಬೇಕಾಯಿತು. ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ