-ಸ್ವಚ್ಛತೆಗೆ ಆದ್ಯತೆ
-ಅಂಗನವಾಡಿಗಳ ಸಮಸ್ಯೆ ಬಗೆಹರಿಸಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸವಿತಾಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯ ಅಂಗನವಾಡಿಗಳಲ್ಲಿ ಆಹಾರದ ಕಳಪೆ ಗುಣಮಟ್ಟ, ಅಡುಗೆ ಕೋಣೆಗಳೇ ಇಲ್ಲದಿರುವುದು, ಶೌಚಾಲಯಗಳು ಸ್ವಚ್ಛವಾಗಿಲ್ಲದಿರುವುದು ಗಮನಕ್ಕೆ ಬಂದಿದ್ದು, ಅವೆಲ್ಲವನ್ನು ಸರಿಪಡಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಸವಿತಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಂಗನವಾಡಿ ಸ್ಥಿತಿಗತಿಗಳನ್ನು ಪರಿಶೀಲಿಸಲು ಇತ್ತೀಚೆಗೆ ಕೆಲವು ಅಂಗನವಾಡಿಗಳಿಗೆ ಭೇಟಿ ನೀಡಿದ್ದ ವೇಳೆ ಸಾಕಷ್ಟು ಸಮಸ್ಯೆಗಳು ಕಂಡು ಬಂದವು. ಅಲ್ಲಿನ ಸ್ವಚ್ಛತೆಗೆ ಗಮನ ನೀಡಬೇಕಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪರಿಶೀಲಿಸಿಲ್ಲವೆಂಬ ದೂರುಗಳೂ ಕೇಳಿ ಬಂತು ಎಂದರು.ಜಿಲ್ಲೆಯಲ್ಲಿ ಸಾಕಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲವೊಂದು ಕಡೆ ಅವಧಿ ಮುಗಿದ ಆಹಾರ ಪದಾರ್ಥ ಕಂಡು ಬಂತು. ಕೆಲವೊಂದು ಕಡೆ ಶೌಚಾಲಯದ ಬಳಿ ಪಾತ್ರೆಗಳನ್ನು ಸ್ಪಚ್ಛ ಮಾಡಲಾಗುತ್ತಿದೆ. ಕೆಲವು ಅಂಗನವಾಡಿಗಳಲ್ಲಿ ಸಂದರ್ಶಕರ ಪುಸ್ತಕವೇ ಇಲ್ಲ ಎಂದರು.ಅರೆಕಾಲಿಕ ಕಾನೂನು ಸ್ವಯಂ ಸೇವಕರ ಆಯ್ಕೆ:
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳಿಗೆ ವಿವಿಧ ರೀತಿಯ ಸಂಸ್ಥೆಗಳಿಗೆ ಕಾನೂನು ನೆರವು, ಸೇವೆಗಳನ್ನು ನೀಡುವ ಸಲುವಾಗಿ ಅರೆಕಾಲಿಕ ಕಾನೂನು ಸ್ವಯಂಸೇವಕರನ್ನು ಆಯ್ಕೆ ಮಾಡಬೇಕಿದೆ ಎಂದರು.ಶಿಕ್ಷಕರು (ನಿವೃತ್ತ ಶಿಕ್ಷಕರು ಸೇರಿ), ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರು, ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು, ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು (ವಕೀಲರಾಗಿ ನೋಂದಣಿಯಾಗುವವರೆಗೂ) ರಾಜಕೀಯವಲ್ಲದ ಸಂಘಗಳ ಸದಸ್ಯರು, ಸೇವಾ ಮನೋಭಾವ ಇರುವ ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಮೈತ್ರಿ ಸಂಘಗಳು, ವಿದ್ಯಾವಂತ ಉತ್ತಮ ನಡತೆವುಳ್ಳ ಹೆಚ್ಚಿನ ಅವಧಿ ಕಾರಾಗೃಹದಲ್ಲಿ ಕಳೆಯುತ್ತಿರುವ ಅಪರಾಧಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರೆಕಾಲಿಕ ಕಾನೂನು ಸ್ವಯಂ ಸೇವಕರೆಂದು ನಿರ್ಧರಿಸುವ ಇತರೆ ಯಾವುದೇ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 175 ಹುದ್ದೆಗಳು ಖಾಲಿ ಇದ್ದು, ರಾಮನಗರ ತಾಲೂಕು 100, ಚನ್ನಪಟ್ಟಣ ತಾಲೂಕು 25, ಕನಕಪುರ 25 ಹಾಗೂ ಮಾಗಡಿ 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ವಸ್ತು ಸ್ಥಿತಿಯ ಬಗ್ಗೆ ಉತ್ತಮವಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಬಾರದು ಎಂದು ತಿಳಿಸಿದರು.ಅರ್ಜಿಯೊಂದಿಗೆ ಸ್ವ-ವಿವರ ಇರುವ ಅರ್ಜಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು ಹಾಗೂ ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಅಭ್ಯರ್ಥಿಯು ಕಾರ್ಯ ನಿರ್ವಹಿಸಲು ಇಚ್ಛಿಸುವ ಬಗ್ಗೆ ಸ್ವ-ಇಚ್ಛಾ ಪತ್ರ ಸಲ್ಲಿಸಬೇಕೆಂದರು. ನೇಮಕಾತಿ ತಾತ್ಕಾಲಿಕ. ಯಾವುದೇ ಸಂಬಳ, ವೇತನಗಳು ಇರುವುದಿಲ್ಲ. ಕೇವಲ ಗೌರವಧನದ ಆಧಾರದ ಮೇಲೆ 3 ವರ್ಷದ ಅವಧಿಗೆ ಮಾತ್ರ ನೇಮಕಾತಿ ಮಾಡಲಾಗುವುದು. ಸಮಿತಿಯ ತೀರ್ಮಾನ ಅಂತಿಮ. ಅಭ್ಯರ್ಥಿಗಳಿಗೆ ಈ ಹುದ್ದೆಗಳಲ್ಲಿ ಮುಂದುವರೆಸುವ ಬಗ್ಗೆ ಯಾವುದೇ ಖಾಯಂ ಮಾಡಿಕೊಳ್ಳುವ ಬಗ್ಗೆ ಪ್ರಾಧಿಕಾರ ಯಾವುದೇ ಆಶ್ವಾಸನೆ ನೀಡಿಲ್ಲ ಎಂದು ಹೇಳಿದರು.
ಶೇ.5 ರಿಯಾಯಿತಿ ಲಾಭ ಪಡೆಯಿರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ) ಆರ್ಥಿಕ ವರ್ಷದ ಪ್ರಾರಂಭದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದ್ದಲ್ಲೀ ಶೇ.5ರಷ್ಟು ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದ ಅವಧಿಯನ್ನು ಜು.31ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್ . ಸವಿತಾ ತಿಳಿಸಿದರು.