ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು, ಸುಳ್ಳು ಜಾತಿ ಪತ್ರ ನೀಡಿ ಶಾಸಕರಾಗಿರುವ ಕೊತ್ತೂರು ಮಂಜುನಾಥ್ ಅವರನ್ನು ಬಂಧಿಸಿ, ಪರಿಶಿಷ್ಟರ ಮೀಸಲಾತಿ ಹಕ್ಕು ಅವಕಾಶಗಳ ವಂಚನೆ ತಡೆ ಕಾಯ್ದೆ ಜಾರಿ ಮಾಡಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಹಿಂದುಳಿದ ಪವರ್ಗ-1ಕ್ಕೆ ಸೇರಿರುವ ಬೈರಾಗಿ ಜನಾಂಗದ ಕೊತ್ತೂರು ಮಂಜುನಾಥ್ ಕೋಲಾರ ಜಿಲ್ಲೆ ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಬುಡಗ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ಖಂಡಿಸಿದರು.
ಸುಳ್ಳು ಜಾತಿಯ ಪತ್ರ ನೀಡಿ ಶಾಸಕರಾಗುವ ಮೂಲಕ ನೈಜ ಪರಿಶಿಷ್ಟರ ಮೀಸಲಾತಿ ಹಕ್ಕು- ಅವಕಾಶಗಳ ವಂಚನೆ ಮಾಡಿದ್ದಾರೆ. ಇವರ ಕೋಲಾರ ಜಿಲ್ಲಾಧಿಕಾರಿಗಳ ಸಮಿತಿ ವರದಿ ಎತ್ತಿ ಹಿಡಿದು ಶಾಸಕ ಸ್ಥಾನವನ್ನು ರಾಜ್ಯ ಉಚ್ಚ ನ್ಯಾಯಲಯದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶಿಸಿರುವುದನ್ನು ಸ್ವಾಗತಿಸಿದರು. ಕೂಡಲೇ ಕೊತ್ತೂರು ಮಂಜುನಾಥ್ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.ಈ ವಿಚಾರ ತಿಳಿದು ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಹಾಗೂ ಶಾಸಕ ಸ್ಥಾನದಿಂದ ವಜಾ ಮಾಡಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟರ ಮೀಸಲಾತಿ ಹಕ್ಕು ಅವಕಾಶಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.