ರಾಜ್ಯದ 6 ಜಿಲ್ಲೆಗಳಲ್ಲಿ 2 ದಿನ ಶೀತಮಾರುತ

KannadaprabhaNewsNetwork |  
Published : Dec 18, 2024, 12:46 AM IST
ಕೋಲ್ಡ್‌ | Kannada Prabha

ಸಾರಾಂಶ

ರಾಜ್ಯದ ಆರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ತೀವ್ರ ಕೋಲ್ಡ್‌ ವೇವ್‌ (ಶೀತ ಅಲೆ) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

- ಬೀದರ್‌, ಕಲಬುರಗಿ, ವಿಜಯಪುರಕ್ಕೆ ರೆಡ್‌ ಅಲರ್ಟ್‌

==

ಬೀದರ್‌, ವಿಜಯಪುರದಲ್ಲಿ ಮಂಗಳವಾರ 8 ಡಿ.ಸೆ.ಅತಿ ಕಡಿಮೆ ಕನಿಷ್ಠ ಉಷ್ಣಾಂಶ

ಬೆಳಗಾವಿ 9 ಡಿ.ಸೆ, ಧಾರವಾಡ 10 ಡಿ.ಸೆ., ಬೆಂಗಳೂರಲ್ಲಿ 16 ಡಿ.ಸೆ. ತಾಪಮಾನ

==

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಆರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ತೀವ್ರ ಕೋಲ್ಡ್‌ ವೇವ್‌ (ಶೀತ ಅಲೆ) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಳೆ, ಮೋಡ ಇಲ್ಲದ ಕಾರಣ ಶುಭ್ರಾಕಾಶ ನಿರ್ಮಾಣ, ಕನಿಷ್ಠ ಉಷ್ಣಾಂಶದಲ್ಲಿ ಸುಮಾರು 5 ಡಿಗ್ರಿ ಸೆಲ್ಶಿಯಸ್‌ನಷ್ಟು ಇಳಿಕೆ ಹಾಗೂ ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಉತ್ತರ ಒಳನಾಡಿನ ಆರು ಜಿಲ್ಲೆಗಳಲ್ಲಿ ಶೀತ ಅಲೆ ಕಾಣಿಸಿಕೊಂಡಿದೆ. ಇನ್ನೂ ಎರಡು ದಿನ ಶೀತ ಅಲೆ ಬೀಸಲಿದೆ.

ಈ ಹಿನ್ನೆಲೆಯಲ್ಲಿ ಬೀದರ್‌, ಕಲಬುರಗಿ ಹಾಗೂ ವಿಜಯಪುರದಲ್ಲಿ ತೀವ್ರ ಶೀತ ಅಲೆ ಸಾಧ್ಯತೆ ಇರುವುದರಿಂದ ರೆಡ್‌ ಅಲರ್ಟ್‌, ಯಾದಗಿರಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಡಿ.18ಕ್ಕೆ ಬೀದರ್‌, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ. ಮಂಗಳವಾರ ಬೀದರ್‌ ಹಾಗೂ ವಿಜಯಪುರದಲ್ಲಿ ತಲಾ 8 ಡಿ.ಸೆ. ಅತಿ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಬೆಳಗಾವಿಯಲ್ಲಿ 9 ಡಿ.ಸೆ, ಧಾರವಾಡದಲ್ಲಿ 10 ಡಿ.ಸೆ., ರಾಜಧಾನಿ ಬೆಂಗಳೂರಿನಲ್ಲಿ 16 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಿ.19 ರಿಂದ ಚಳಿ ಕಡಿಮೆ:

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ವಿವಿಧ ಭಾಗದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ಆ ನಂತರ ಮತ್ತೆ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ