ವಿಮೆ ಹಣಕ್ಕಾಗಿ ಪಾಳು ಭೂಮಿಯಲ್ಲಿ 9 ಈರುಳ್ಳಿ ಸಸಿ ನೆಟ್ಟು ವಂಚನೆ!

KannadaprabhaNewsNetwork |  
Published : Apr 24, 2025, 12:00 AM IST
23ಕೆಪಿಎಲ್27 ಬೆಳೆ ವಿಮೆಗಾಗಿಯೇ 9 ಈರುಳ್ಳಿ ಸಸಿಗಳನ್ನು ನಾಟಿ ಮಾಡಿರುವುದು. | Kannada Prabha

ಸಾರಾಂಶ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಹಣ ಲೂಟಿ ಮಾಡಲು ಪಾಳು ಬಿದ್ದ ಭೂಮಿಯಲ್ಲಿ 9 ಈರುಳ್ಳಿ ಸಸಿ ನಾಟಿ ಮಾಡಿ, ಫೋಟೋ ಅಪ್ಲೋಡ್ ಮಾಡಿರುವ ಘಟನೆಯೊಂದು ಕೊಪ್ಪಳದ ಕುಷ್ಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಹಣ ಲೂಟಿ ಮಾಡಲು ಪಾಳು ಬಿದ್ದ ಭೂಮಿಯಲ್ಲಿ 9 ಈರುಳ್ಳಿ ಸಸಿ ನಾಟಿ ಮಾಡಿ, ಫೋಟೋ ಅಪ್ಲೋಡ್ ಮಾಡಿರುವ ಘಟನೆಯೊಂದು ಕೊಪ್ಪಳದ ಕುಷ್ಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ರೈತರ ಹೆಸರಿನಲ್ಲಿ ಅಕ್ರಮ ನಡೆಸುತ್ತಿರುವ ಗ್ಯಾಂಗ್‌ನವರೇ ಬೆಳೆ ವಿಮೆ ಪಾವತಿಸಿ ಪರಿಹಾರ ಪಡೆಯುತ್ತಾರೆ. ಕೆಲವೊಂದು ಪ್ರಕರಣದಲ್ಲಿ ರೈತರು ಸಹ ಪಾಲುದಾರರಾಗಿದ್ದಾರೆ. ಮತ್ತೆ ಕೆಲ ಪ್ರಕರಣಗಳಲ್ಲಿ ರೈತರಿಗ ಗೊತ್ತಿಲ್ಲದಂತೆ ಅವರ ಹೆಸರಿನ ಪಹಣಿಗೆ ಬೆಳೆ ವಿಮೆ ಕಂತು ಪಾವತಿಸಿ, ಪರಿಹಾರ ಜಮೆಯಾಗುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಖದೀಮರು ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ ಅನೇಕ ಗ್ರಾಮಗಳಲ್ಲಿ ಪಾಳು ಬಿದ್ದ ಭೂಮಿಗೆ ಲಕ್ಷ ಲಕ್ಷ ಬೆಳೆ ವಿಮೆ ಪರಿಹಾರ ಪಡೆದಿದ್ದಾರೆ. ಈ ಅಕ್ರಮದ ಜಾಡು ಹಿಡಿದು ಹೋದಾಗ ಪಾಳು ಬಿದ್ದ ಭೂಮಿಯ ಮೂಲೆಯೊಂದರಲ್ಲಿ 9 ಈರುಳ್ಳಿ ಸಸಿ ನಾಟಿ ಮಾಡಿ, ಈರುಳ್ಳಿ ಬೆಳೆಯ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹೀಗೆ ಬೆಳೆ ಫೋಟೋ ಅಪ್ಲೋಡ್ ಮಾಡಿ, ನಂತರ ಇದೇ ಈರುಳ್ಳಿ ಬೆಳೆಗೆ ವಿಮಾ ಪರಿಹಾರ ಪಾವತಿಯಾಗುವಂತೆ ಮೊದಲೇ ಡೀಲ್ ಮಾಡಿಕೊಂಡಿದ್ದಾರೆ.

ಬೆಳೆ ಬೆಳೆದ ಫೋಟೋ ಅಪ್ಲೋಡ್ ಮಾಡಿರುವುದನ್ನು ಪರಿಶೀಲಿಸುವ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಅಧಿಕಾರಿಗಳು ಹೊಲಕ್ಕೆ ಹೋಗಿ ಪಾಳು ಭೂಮಿಯಲ್ಲಿ ಬೆಳೆ ಬೆಳೆದಿರುವ ಬಗ್ಗೆ ವರದಿ ಸಲ್ಲಿಸಿದ್ದರೆ ಈ ಅಕ್ರಮ ನಡೆಯುತ್ತಿರಲಿಲ್ಲ. ಇದರಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಸೇರಿ ಇತರೆ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿದ್ದರಿಂದ ಅಕ್ರಮ ನಡೆದಿದೆ ಎಂದು ಹೇಳಲಾಗಿದೆ.

ಕೇಸ್‌ ದಾಖಲಿಸಲು ಹಿಂದೇಟು:

ಬೆಳೆ ವಿಮಾ ಪರಿಹಾರದಲ್ಲಿ ಆಗಿರುವ ಅಕ್ರಮದ ಕುರಿತು ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿದ ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಬ್ಯಾಂಕ್‌ನಲ್ಲಿ ಕೆಲವೊಂದು ಖಾತೆಗಳಲ್ಲಿ ಜಮೆಯಾಗಿದ್ದ ಪರಿಹಾರದ ಹಣವನ್ನು ಫ್ರೀಜ್‌ ಮಾಡಿದ್ದಾರೆ. ಇನ್ನುಳಿದಂತೆ ಅನೇಕರು ಬೆಳೆ ವಿಮಾ ಪರಿಹಾರ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗುತ್ತಿಲ್ಲ. ತಪ್ಪಿತಸ್ಥರು ಯಾರೆಂದು ಮಾಹಿತಿ ಇದ್ದರೂ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿಲ್ಲ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದರಿಂದಲೇ ಪ್ರಕರಣ ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ