ಎಳನೀರು ಖರೀದಿಯಲ್ಲಿ ವಂಚನೆ: ಆರೋಪ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಎಳನೀರು ಖರೀದಿಯಲ್ಲಿ ದಲ್ಲಾಳಿ ಹಾಗೂ ವರ್ತಕರಿಂದ ರೈತರಿಗೆ ಭಾರೀ ವಂಚನೆ: ಆರೋಪಶಾಸಕ ಕೆ.ಎಂ.ಉದಯ್‌ರಿಂದ ಮೋಸಕ್ಕೆ ಕಡಿವಾಣ ಹಾಕುವ ಭರವಸೆ

ಕನ್ನಡಪ್ರಭ ವಾರ್ತೆ ಮದ್ದೂರುಎಳನೀರು ಖರೀದಿಯಲ್ಲಿ ದಲ್ಲಾಳಿಗಳು ಹಾಗೂ ವರ್ತಕರಿಂದ ರೈತರಿಗೆ ಆಗುತ್ತಿರುವ ವಂಚನೆಗೆ ಶೀಘ್ರದಲ್ಲೇ ಕಡಿವಾಣ ಹಾಕುವುದಾಗಿ ಶಾಸಕ ಕೆ.ಎಂ. ಉದಯ್ ಶುಕ್ರವಾರ ಹೇಳಿದರು.

ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರಿಗೆ ವರ್ತಕರು ಮತ್ತು ದಲ್ಲಾಳಿಗಳಿಂದ ಎಳನೀರು ಖರೀದಿ ಮತ್ತು ಎಣಿಕೆಯಲ್ಲಿ ಆಗುತ್ತಿರುವ ಮೋಸ ಹಾಗೂ ಮಾರುಕಟ್ಟೆ ಮೂಲ ಸೌಲಭ್ಯಗಳ ಬಗ್ಗೆ ರೈತರು ನೇರವಾಗಿ ಶಾಸಕರಿಗೆ ದೂರು ನೀಡಿದರು.

ಗ್ರಾಮೀಣ ಭಾಗದಿಂದ ನಾವುಗಳು ಕಷ್ಟ-ಸುಖಗಳ ನಡುವೆ ಎಳನೀರನ್ನು ಮಾರುಕಟ್ಟೆಗೆ ಸಾಗಾಣಿಗೆ ಮಾಡುತ್ತಿದ್ದೇವೆ. ಆದರೆ, ದಲ್ಲಾಳಿಗಳು ಕೆಲವು ವರ್ತಕರೊಂದಿಗೆ ಶಾಮೀಲಾಗಿ ಪ್ರತಿ 100 ಎಳನೀರಿಗೆ 10 ಎಳನೀರುವ ಕಡಿತ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ. ಇಂತಹ ವ್ಯವಹಾರಗಳಿಗೆ ಕಡಿವಾಣ ಹಾಕಿ ಎಂದು ಮಾದರಹಳ್ಳಿಯ ರೈತ ಕುಮಾರ್ ಶಾಸಕರೆದುರು ಅಳಲು ತೋಡಿಕೊಂಡರು.

ಈ ಬಗ್ಗೆ ಎಪಿಎಂಸಿ ಕಾರ್‍ಯದರ್ಶಿ ಎ.ಸಿ. ಸಂದೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಉದಯ್, ಎಳನೀರು ಖರೀದಿಯಲ್ಲಿ ಯಾವುದೇ ರೀತಿಯಲ್ಲಿ ರೈತರಿಗೆ ವಂಚನೆಯಾಗದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದರು.

ಗ್ರಾಮೀಣ ಪ್ರದೇಶ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಎಳನೀರು ಸಾಗಾಣಿಕೆ ಮಾಡಿದ ನಂತರ ಖರೀದಿ ಮಾಡುವ ವರ್ತಕರು ಮಾರುಕಟ್ಟೆಗೆ ತೆರಿಗೆ ಪಾವತಿ ಮಾಡದೆ ವಂಚನೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪ್ರತಿನಿತ್ಯ ತಾಲೂಕಿನಿಂದ 70 ರಿಂದ 80 ಲಾರಿಗಳಷ್ಟು ಎಳನೀರು ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ. ಆದರೆ, ಕೇವಲ 20 ರಿಂದ 30 ಲಾರಿಗಳಿಂದ ಮಾತ್ರ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಉಳಿದ ಲಾರಿಗಳ ತೆರಿಗೆ ವಸೂಲಿ ಮಾಡುವಲ್ಲಿ ವಿಫಲವಾಗಿರುವ ಮಾರುಕಟ್ಟೆ ಅಧಿಕಾರಿಗಳು, ವರ್ತಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಶಾಸಕರು ಕಿಡಿಕಾರಿದರು.

ತೆರಿಗೆ ವಸೂಲಿಯಲ್ಲಿ ಕರ್ತವ್ಯ ಲೋಪವೆಸಗುವ ಮಾರುಕಟ್ಟೆ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಮಾರುಕಟ್ಟೆಯಲ್ಲಿ ತೆರಿಗೆ ವಸೂಲಿಯಲ್ಲಿ ಆಗುತ್ತಿರುವ ವಂಚನೆ ಬಗ್ಗೆ ಮಾರುಕಟ್ಟೆ ಅಧಿಕಾರಿಗಳು ತಾಲೂಕಿನಾದ್ಯಂತ ಎಳನೀರು ಸಾಗಿಸುವ ಲಾರಿಗಳ ವರ್ತಕರಿಂದ ಕಟ್ಟುನಿಟ್ಟಿನ ತೆರಿಗೆ ವಸೂಲಿ ಮಾಡುವಂತೆ ಸೂಚನೆ ನೀಡಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಶುಚಿತ್ವಕ್ಕಾಗಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ವೇತನ ಪಾವತಿ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ದೊರಕಿಸಿಕೊಡುತ್ತಿಲ್ಲ ಎಂದು ಮಾರುಕಟ್ಟೆ ಕೂಲಿ ಕಾರ್ಮಿಕರು ಮನವಿ ಸಲ್ಲಿಸಿದರು.

ಮುಂದಿನ ದಿನಗಳಲ್ಲಿ ಮಾರುಕಟ್ಟೆ ಶುಚಿತ್ವ ಮತ್ತು ಭದ್ರತಾ ಸಿಬ್ಬಂದಿ ನೇಮಕದ ಗುತ್ತಿಗೆಯಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.

ಈ ವೇಳೆ ತಹಸೀಲ್ದಾರ್ ಸೋಮಶೇಖರ್, ಎಪಿಎಂಸಿ ಕಾರ್‍ಯದರ್ಶಿ ಎ.ಸಿ. ಸಂದೇಶ್, ಸಹಾಯಕ ಕಾರ್‍ಯದರ್ಶಿಗಳಾದ ಎಚ್.ಪಿ. ವಾಸುದೇವಮೂರ್ತಿ, ಎಂ.ಎಲ್. ಶಿವಕುಮಾರ್ ಇದ್ದರು.15ಕೆಎಂಎನ್ ಡಿ27

ಮದ್ದೂರು ಎಳನೀರು ಮಾರುಕಟ್ಟೆ ಆವರಣದಲ್ಲಿ ಶಾಸಕ ಕೆ.ಎಂ.ಉದಯ್ ರೈತರು, ಕೂಲಿ ಕಾರ್ಮಿಕರ ಮನವಿ ಆಲಿಸಿದರು.

Share this article