ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶಿಗ್ಗಾಂವಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಮತ್ತು ವೃತ್ತಿಪರ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ವಸತಿ ನಿಲಯ ಸ್ಥಳಾಂತರಿಸಿದ್ದು, ಅಲ್ಲಿ ಯಾವುದೇ ಸೌಲಭ್ಯ ಇಲ್ಲ, ವಿದ್ಯಾರ್ಥಿಗಳು ನೆಲಕ್ಕು ಕುಳಿತು ಊಟ ಮಾಡಬೇಕಿದೆ. ಮಲಗಲು ಮಂಚದ ವ್ಯವಸ್ಥೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಗ್ಗಾಂವಿ: ವಸತಿ ನಿಲಯ ಸ್ಥಳಾಂತರವಾದರೂ ಮೂಲ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಊಟ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಮತ್ತು ವೃತ್ತಿಪರ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಊಟ ಮತ್ತು ಮಲಗುವ ಆಸನಗಳ ಸಾಮಗ್ರಿ ಸ್ಥಳಾಂತರಿಸದೇ ಇರುವುದರಿಂದ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಊಟ, ಉಪಾಹಾರ ಮಾಡುವಂತಾಗಿದೆ. ಕುಳಿತುಕೊಳ್ಳಲು ಜಾಗೆ ಇಕ್ಕಟ್ಟಾದ ಕಾರಣ ಸರತಿಯಂತೆ ಊಟ ಮಾಡಬೇಕಾಗಿದೆ. ಮಲಗುವ ಮಂಚ ಹಾಗೂ ಊಟದ ಟೇಬಲ್ ತಕ್ಷಣ ಸ್ಥಳಾಂತರಿಸಿ ಅನುಕೂಲ ಮಾಡಬೇಕು ಎಂದು ಅಗ್ರಹಿಸಿದರು.ಅಡುಗೆ ಮಾಡುವವರು ಕೇವಲ ಮೂವರಿದ್ದ ಕಾರಣ ಊಟ, ಉಪಾಹಾರ ವಿಳಂಬವಾಗುತ್ತಿದೆ. ಇದರಿಂದ ಸಕಾಲಕ್ಕೆ ತರಗತಿಗೆ ಹಾಜರಾಗಲು ಆಗುತ್ತಿಲ್ಲ. ತಕ್ಷಣ ಅಡುಗೆ ಸಿಬ್ಬಂದಿ ನೇಮಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಹಳೆ ಕಟ್ಟಡದಲ್ಲಿಯ ಊಟದ ಮತ್ತು ಮಲಗುವ ಆಸನಗಳ ಸಾಮಗ್ರಿಗಳನ್ನು ತರಿಸಲಾಗುವುದು, ಅಡುಗೆ ಸಿಬ್ಬಂದಿ ನೇಮಿಸಿಕೊಳ್ಳಲು ವಾರ್ಡನ್ ಅವರಿಗೆ ಸೂಚಿಸಿದ್ದೇನೆ. ವಸತಿ ನಿಲಯದ ರಾತ್ರಿ ವೇಳೆ ಕಾವಲುಗಾರರನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.ಆನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.