ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪ್ರತಿವರ್ಷವೂ ಬರಗಾಲದಿಂದ ತತ್ತರಿಸಿ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಪೂನಾ, ಮುಂಬೈ, ಸೇರಿದಂತೆ ಅನೇಕ ರಾಜ್ಯಗಳಿಗೆ ಗುಳೇಹೋಗುವ ಮೂಲಕ ತಮ್ಮ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಿಂದುಳಿದ ಪ್ರದೇಶವಾಗಿದೆ. ಕಾರಣ ಸಧ್ಯ ಮುದ್ದೇಬಿಹಾಳ ಮತಕ್ಷೇತ್ರ (೩೭೧) ಜೆ ಕಲಂ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಬೆಳಗಾವಿಯಲ್ಲಿ ನಡೆದ ಶುಕ್ರವಾರ ಕೊನೆ ದಿನದ ವಿಧಾನಸಭಾ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿ ಗಮನಸೆಳೆದರು.ಈಗಾಗಲೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬ.ಬಾಗೇವಾಡಿ, ಸಿಂದಗಿ, ಇಂಡಿ ತಾಲೂಕುಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದ ಪ್ರದೇಶಗಳಾಗಿದ್ದು, ಯಾವ ತಾಲೂಕುಗಳು ತೀರಾ ಹಿಂದುಳಿದಿವೆಯೋ ಅಂಥ ತಾಲೂಕು ಪ್ರದೇಶಗಳನ್ನು (೩೭೧) ಜೆ ಹೈದರಾಬಾದ ಕರ್ನಾಟಕ ವ್ಯಾಪ್ತಿಗೆ ಸೇರ್ಪಡೆ ಮಾಡಿದರೆ ನಂಜುಂಡಪ್ಪ ವರದಿ ಪ್ರಕಾರ ಈ ಭಾಗದ ಮಕ್ಕಳ ಶಿಕ್ಷಣಕ್ಕೆ, ರೈತರ ಪ್ರಗತಿಗೆ, ಮಹಿಳೆಯರ ರಕ್ಷಣೆಗೆ, ಅನುಕೂಲ ಆಗುವುದಲ್ಲದೇ ಎಲ್ಲ ಹಿಂದುಳಿದ ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.
ಅದರಲ್ಲೂ ಮುದ್ದೇಬಿಹಾಳ, ಬಸವನಬಾಗೇವಾಡಿ ಕ್ಷೇತ್ರಗಳು ಶರಣರು ಸಂತರು, ಜನಿಸಿದ ಪುಣ್ಯಭೂಮಿಯಾಗಿದೆ. ಮಾತ್ರವಲ್ಲದೇ, ಐತಿಹಾಸಿಕ ಪುರಾವೆಗಳೇ ಸಾಕ್ಷಿಯಾಗಿವೆ. ಹೀಗೇ ರಾಜ್ಯದಲ್ಲಿ ಹಲವು ತಾಲೂಕು ತೀರಾ ಹಿಂದುಳಿದ ಪ್ರದೇಶವಾಗಿ ಅಭಿವೃದ್ಧಿಯಾಗದೇ ಆಯಾ ಭಾಗದ ಜನರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಈ ನಿಟ್ಟಿನಲ್ಲಿ ಅವುಗಳನ್ನೇಲ್ಲ ಅಭಿವೃದ್ಧಿ ಮಾಡಬೇಕಾದರೆ ಯಾವ ಯಾವ ಈ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆನ್ನುವದನ್ನು ಪ್ಲಾನಿಂಗ್ ಕಮಿಟಿಯೊಂದಿಗೆ ಕೂಲಂಕುಶವಾಗಿ ಚರ್ಚಿಸಿ ಆ ಮೂಲಕ ಅಭಿವೃದ್ಧಿಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಇರಬೇಕು. ಇಲ್ಲದಿದ್ದರೆ ಯಾವುದನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.