ರಂಗಗ್ರಾಮ ಶೇಷಗಿರಿಯಲ್ಲಿ ೨೨ರಿಂದ ರಂಗ ಶಿಬಿರ

KannadaprabhaNewsNetwork |  
Published : Dec 16, 2023, 02:00 AM IST
ರಂಗ ಗ್ರಾಮ ಶೇಷಗಿರಿ | Kannada Prabha

ಸಾರಾಂಶ

ಹಾನಗಲ್ಲಿನ ರಂಗಗ್ರಾಮ ಶೇಷಗಿರಿಯಲ್ಲಿ ಡಿ. ೨೨ರಿಂದ ೨೭ರ ವರೆಗೆ ರಂಗ ಶಿಬಿರ ನಡೆಯಲಿದ್ದು, ರಾಜ್ಯದ ಖ್ಯಾತ ರಂಗ ತಜ್ಞರ ಮಾರ್ಗದರ್ಶನದಲ್ಲಿ ರಂಗ ತರಬೇತಿ, ೬ ನಾಟಕ ಪ್ರದರ್ಶನ ನಡೆಯಲಿವೆ. ಪ್ರತಿದಿನ ಬೆಳಗಿನಿಂದ ಸಂಜೆವರೆಗೆ ಶಿಬಿರಾರ್ಥಿಗಳಿಗೆ ರಂಗ ತರಬೇತಿ, ರಂಗಭೂಮಿ ಕುರಿತು ಚರ್ಚೆ, ನಾಟಕಗಳ ವಿಮರ್ಶೆ ನಡೆಯಲಿದೆ. ಸಂಜೆ ರಂಗ ಶಂಕರದ ಕಲಾವಿದರಿಂದ ಪ್ರತಿನಿತ್ಯ ಒಂದೊಂದು ನಾಟಕ ಪ್ರದರ್ಶನಗೊಳ್ಳುವುದು.

ಹಾನಗಲ್ಲ: ರಂಗ ಗ್ರಾಮ ಶೇಷಗಿರಿಯಲ್ಲಿ ಡಿ. ೨೨ರಿಂದ ೨೭ರ ವರೆಗೆ ರಂಗ ಶಿಬಿರ ನಡೆಯಲಿದ್ದು, ರಾಜ್ಯದ ಖ್ಯಾತ ರಂಗ ತಜ್ಞರ ಮಾರ್ಗದರ್ಶನದಲ್ಲಿ ರಂಗ ತರಬೇತಿ, ೬ ನಾಟಕ ಪ್ರದರ್ಶನ ನಡೆಯಲಿವೆ ಎಂದು ಗಜಾನನ ಯುವಕ ಮಂಡಳದ ಅಧ್ಯಕ್ಷ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಪ್ರಭು ಗುರಪ್ಪನವರ ತಿಳಿಸಿದ್ದಾರೆ.

ಬೆಂಗಳೂರಿನ ರಂಗ ಶಂಕರದ ಸಹಯೋಗದಲ್ಲಿ ಶೇಷಗಿರಿಯ ಗಜಾನನ ಯುವಕ ಮಂಡಳದಿಂದ ಈ ರಂಗ ತರಬೇತಿ ಆಯೋಜಿಸಲಾಗಿದ್ದು, ಇಡೀ ರಾಜ್ಯಾದ್ಯಂತ ಕಲಾವಿದರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ೪ ದಶಕಗಳಿಂದ ಶೇಷಗಿರಿ ರಂಗ ಪ್ರೀತಿಗೆ ಹೆಸರು ಮಾಡಿದ್ದು ಹತ್ತು ಹಲವು ಕಡೆಯಿಂದ ಈ ರಂಗ ಕಾರ್ಯಕ್ಕೆ ಬೆಂಬಲವೂ ಇದೆ. ಇದೊಂದು ಶಾಶ್ವತ ರಂಗ ತರಬೇತಿ ಕೇಂದ್ರವಾಗಿಯೇ ಬೆಳೆದು ಕಲಾವಿದರಿಗೆ ಪೋಷಣೆಯ ಸ್ಥಳವಾಗಬೇಕೆಂಬ ಆಶಯ ನಮ್ಮದು. ಈ ವರೆಗೆ ಹತ್ತು ಹಲವು ರಂಗ ತರಬೇತಿಗಳನ್ನು ನಡೆಸಿದ್ದೇವೆ. ಮಕ್ಕಳ ರಂಗ ಶಿಬಿರಗಳನ್ನು ಅರ್ಥಪೂರ್ಣವಾಗಿ ನಡೆಸಿ ಖುಷಿಪಟ್ಟಿದ್ದೇವೆ ಎಂದರು.

ಡಿ. ೨೨ರಿಂದ ನಡೆಯುವ ರಂಗ ಶಿಬಿರದಲ್ಲಿ ತರಬೇತಿಗೆ ಬರುವ ಕಲಾವಿದರಿಗೆ ಉಚಿತ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ೧೮ ವರ್ಷ ವಯೋಮಾನ ದಾಟಿದ ಕೇವಲ ೫೦ ಕಲಾವಿದರಿಗೆ ಮಾತ್ರ ತರಬೇತಿಗೆ ಅವಕಾಶವಿದೆ. ಶಿಬಿರದಲ್ಲಿ ಬೆಂಗಳೂರಿನ ರಂಗ ತಜ್ಞ ಬಿ. ಸುರೇಶ ನಾಟಕ ಬರೆಯುವುದು ಹೇಗೆ?, ಶರಣ್ಯ ಅವರು ನಿರ್ದೇಶಕನ ಜವಾಬ್ದಾರಿ, ಧಾರವಾಡದ ಗರುಡ ಪ್ರಕಾಶ ಅವರು ಕಂಪನಿ ನಾಟಕಗಳು ಏಕೆ ಮುಖ್ಯ?, ಬೆಂಗಳೂರಿನ ಎಂ.ಡಿ. ಪಲ್ಲವಿ ಅವರು ಸಂಗೀತ ಮತ್ತು ರಂಗಭೂಮಿ, ಸುರೇಂದ್ರನಾಥ ಅವರು ರಂಗಭೂಮಿಯನ್ನು ಸಜ್ಜುಗೊಳಿಸುವುದು ಹೇಗೆ? ಎಂಬ ವಿಷಯಗಳ ಕುರಿತು ತರಬೇತಿ ನೀಡುವವರು. ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ ಶಿಬಿರ ಸಂಯೋಜನೆಗೊಂಡಿದೆ. ಪ್ರತಿದಿನ ಬೆಳಗಿನಿಂದ ಸಂಜೆವರೆಗೆ ಶಿಬಿರಾರ್ಥಿಗಳಿಗೆ ರಂಗ ತರಬೇತಿ, ರಂಗಭೂಮಿ ಕುರಿತು ಚರ್ಚೆ, ನಾಟಕಗಳ ವಿಮರ್ಶೆ ನಡೆಯಲಿದೆ. ಸಂಜೆ ರಂಗ ಶಂಕರದ ಕಲಾವಿದರಿಂದ ಪ್ರತಿನಿತ್ಯ ಒಂದೊಂದು ನಾಟಕ ಪ್ರದರ್ಶನಗೊಳ್ಳುವುದು.ಫೆ. ೨೨ರಂದು ಬೆಂಗಳೂರಿನ ಸಂಚಯ ತಂಡದಿಂದ ಕೃಷ್ಣ ಹಬ್ಬಾಲೆ ಹಾಗೂ ಹೇಮಂತಕುಮಾರ ಅವರ ನಾಟ್ಯದೇವ ಚರಿತೆ ನಾಟಕ (ಪೃಥ್ವಿ ವೇಣುಗೋಪಾಲ ನಿರ್ದೇಶನ), ೨೩ರಂದು ನಾ. ದಾಮೋದರ ಶೆಟ್ಟಿ ಅವರ ಕರಿಯ ದೇವರ ಹುಡುಕಿ ನಾಟಕ ಸಮುದಾಯ ಬೆಂಗಳೂರಿನ ಕಲಾವಿದರು (ನಿರಂಜನ ಖಾಲಿಕೊಡ ನಿರ್ದೇಶನ), ೨೪ರಂದು ಮೋಹನ್ ರಾಕೇಶ ಹಾಗೂ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಆದೇ ಅಧುರೇ ನಾಟಕ ವರ್ಣ ಕಲೆಕ್ಟಿವ್ ಮೈಸೂರು (ಪಿ. ಚಾಂದನಿ ನಿರ್ದೇಶನ), ೨೫ರಂದು ಅಭಿಮನ್ಯು ಭೂಪತಿ ಹಾಗೂ ಲೋಹಿತ್ ಎಚ್.ಎಸ್. ಅವರು ಬರೆದ ನಾವು ನಾಟಕ ಬೆಂಗಳೂರಿನ ಅನ್ಸಾಂಬಲ್ ಥೇಟರ್ ಅವರಿಂದ (ಅಭಿಮನ್ಯು ಭೂಪತಿ ನಿರ್ದೇಶನ), ೨೬ರಂದು ಬಿಪಿಆರ್. ಬಾಷಾ ಅವರ ರಚಿಸಿದ ಶವದ ಮನೆ ನಾಟಕ ಬಹುತ್ವ ಪ್ರತಿಷ್ಠಾನ ಹೊಸಪೇಟೆ ಇವರಿಂದ (ಸಹನಾಜ ಪಿಂಜಾರ ನಿರ್ದೇಶನ), ೨೭ರಂದು ಕೃಷ್ಣಮೂರ್ತಿ ಹನೂರ ಅವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ನಾಟಕ ಆಕ್ಟ್ ರಿಯಾಕ್ಟ್‌, ಬೆಂಗಳೂರು ಅವರಿಂದ (ನವೀನ ಸಾಣೆಹಳ್ಳಿ ನಿರ್ದೇಶನ) ಪ್ರದರ್ಶನಗೊಳ್ಳಲಿವೆ ಎಂದು ಅಧ್ಯಕ್ಷ ಪ್ರಭು ಗುರಪ್ಪನವರ ಹಾಗೂ ಸಂಚಾಲಕ ನಾಗರಾಜ ಧಾರೇಶ್ವರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ