ಕನ್ನಡಪ್ರಭ ವಾರ್ತೆ ಮಂಡ್ಯ
ಸಮಾಜದ ಉನ್ನತಿಗೆ ಶ್ರಮಿಸುವವರು ಟೀಕೆ-ವಿಮರ್ಶೆಗಳಿಗೆ ತಲೆಕೆಡೆಸಿಕೊಳ್ಳದೆ ಗುರಿಯತ್ತ ಸಾಗಿದರೆ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ರಾಜೀವ್‌ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಭಗವಾನ್ ತಿಳಿಸಿದರು.ಪ್ರಶಾಂತಿ ಸೇವಾ ಟ್ರಸ್ಟ್ ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಸಾಯಿ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಠ-ಮಾನ್ಯಗಳಲ್ಲಿ ಕಲಿಯುವುದರಿಂದ ಶಿಸ್ತನ್ನು ಮೈಗೂಡಿಸಿಕೊಳ್ಳುತ್ತಾರೆ. ಶಿಸ್ತಿನಿಂದ ಬೆಳೆಯುತ್ತಾರೆ ಎಂಬ ನಂಬಿಕೆ ಜನರಲ್ಲಿದೆ ಎಂದರು.
ಅಂತೆಯೇ ಮಂಡ್ಯದ ಬಹುತೇಕ ಮಂದಿ ದಕ್ಷಿಣ ಕನ್ನಡದ ಅಳಿಕೆಯಲ್ಲಿ ವಿದ್ಯಾಭ್ಯಾಸ ನಡೆಸಿರುವುದು ಅವರು ನಂಬಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಪ್ರಬುದ್ಧ ಆತ್ಮ ಹೊಂದಿರುವವರು ಯಾವುದೇ ಟೀಕೆ ಆರೋಪಗಳಿಗೆ ಗಮನ ಕೊಡುವುದಿಲ್ಲ ಎಂದರು.ಟೀಕೆಗಳು ಸಾಯುತ್ತವೆ, ಸಾಧನೆಗಳು ಬೆಳಗುತ್ತವೆ. ಒಬ್ಬ ವೈದ್ಯ ತಪ್ಪು ಮಾಡಿದರೆ ಒಬ್ಬರೋ, ಇಬ್ಬರೋ ರೋಗಿ ಸಾಯಬಹುದು. ಆದರೆ ಶಿಕ್ಷಕರು ತಪ್ಪು ಮಾಡಿದರೆ ಒಂದು ತಲೆಮಾರು ಸಂಕಷ್ಟಕ್ಕೀಡಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಶಿಸ್ತು, ಸಂಯಮ ಯಾರಲ್ಲಿರುತ್ತದೋ ಅವರು ಯಶಸ್ಸು ಸಾಧಿಸುವುದು ಖಚಿತ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಮುಂದಿನ ಹೆಜ್ಜೆ ಇಡಬೇಕು. ಆಸ್ತಿಕನಾಗಲೀ, ನಾಸ್ತಿಕನಾಗಲೀ, ತಾವು ಆರೋಗ್ಯವಾಗಿದ್ದು, ಇತರರನ್ನೂ ಆರೋಗ್ಯವಾಗಿರಿಸಿಕೊಳ್ಳುವುದು ಸದ್ದರ್ಮವಾಗಿದೆ ಎಂದರು.
ಮಕ್ಕಳಿಗೆ ಕೇವಲ ಪಠ್ಯ ಪುಸ್ತಕ ಮಾತ್ರ ಶೈಕ್ಷಣಿಕ ಅಭಿವೃದ್ಧಿಗೆ ಸಾಧನವಲ್ಲ. ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯವಾಗಿರುತ್ತವೆ ಎಂದು ಅಭಿಪ್ರಾಯಿಸಿದರು.
ಇದೇ ವೇಳೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯ ಸಾಯಿ ಲೋಕ ಸೇವಾ ಗುರುಕುಲಂನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಂಗೀತ ಮತ್ತು ಸ್ವರಮೇಳ ಕರ‍್ಯಕ್ರಮ ನಡೆಸಿಕೊಟ್ಟರು.ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ. ಎ.ವಿ. ಉಮೇಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಸತ್ಯಸಾಯಿ ಲೋಕ ಸೇವಾ ಗುರುಕುಲಂನ ಹಿರಿಯ ವಿದ್ಯಾರ್ಥಿ ಡಾ. ಕೆ. ಚಂದ್ರಶೇಖರ್, ನಾರಾಯಣ್, ಗೌರವ್, ಜಯರಾಮರೆಡ್ಡಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.