ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಂದೂ ಕೂಡ ಸ್ಥಾನಮಾನಕ್ಕಾಗಲಿ, ಪ್ರಶಸ್ತಿಗಾಗಲಿ ಎದುರು ನೋಡದೆ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರು ಸಾಹಿತ್ಯದ ಮೂಲಕವೇ ಮನಸುಗಳನ್ನು ಬೆಸೆದವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಣ್ಣಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದಿಂದ ಆಯೋಜಿಸಿದ್ದ ಜಿಎಸ್‍ಎಸ್ ಜನ್ಮ ಶತಮಾನೋತ್ಸವ, ಕಾವ್ಯಸೌರಭ ಹಾಗೂ ಜಿಎಸ್‍ಎಸ್ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಜಿಎಸ್‍ಎಸ್ ತಮ್ಮ ಕಾವ್ಯಗಳಲ್ಲಿ ನಮ್ಮೊಂದಿಗಿದ್ದಾರೆ. ಈಸೂರಿನಲ್ಲಿ ಜನ್ಮಿಸಿದ್ದ ಜಿಎಸ್‍ಎಸ್ ಮತ್ತು ನನ್ನ ನಡುವೆ ಉತ್ತಮ ಒಡನಾಟವಿತ್ತು. ಅವರ ಮಾತುಗಳು ನನಗೆ ಚೈತನ್ಯ ನೀಡುತ್ತಿದ್ದವು. ಯುವ ಪೀಳಿಗೆ ಅವರ ಕೃತಿ, ಕಾವ್ಯಗಳನ್ನು ಅಧ್ಯಯನ ಮಾಡಬೇಕು ಎಂದರು.

ದೇಶದಲ್ಲೇ ಒಂದು ಜಿಲ್ಲೆಗೆ ಎರಡು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮಗೆ ಮಾತ್ರ. ಜಿಎಸ್‍ಎಸ್ ಪುರಸ್ಕಾರ ಪಡೆಯುತ್ತಿರುವ ವಿಮರ್ಶಕ ಡಾ.ಓ.ಎಲ್.ನಾಗಭೂಷಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.


ಸಂಸದ ಬಿ.ವೈ.ರಾಘವೇಂದ್ರ, ಕಿರಣ್ ದೇಸಾಯಿ ಸಂಪಾದಿಸಿರುವ ಜಿಎಸ್‍ಎಸ್ ಕವನಗಳು ಆಯ್ದ ಸಾಲುಗಳ ಕೃತಿ ನುಡಿ ಬೆಳಗು ಹಾಗೂ ಡಾ.ಜಿ.ಎಸ್.ಅಶೋಕ್ ಅವರ ಜಿಎಸ್‍ಎಸ್ ಮತ್ತು ಚನ್ನವೀರ ಕಣವಿ ಅವರ ಕಾವ್ಯಗಳ ವಿಮರ್ಶಾತ್ಮಕ ಅಧ್ಯಯನ ಕೃತಿ ಭಾವ ಸಮನ್ವಯ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿ, ಕುವೆಂಪು, ಅನಂತಮೂರ್ತಿ ಅವರಂತೆ ಜಿಎಸ್‍ಎಸ್ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಜಿಲ್ಲೆಯಲ್ಲೆ ಅತಿಹೆಚ್ಚು ಜನರನ್ನು ಒಳಗೊಳ್ಳುವ ಸಾಂಸ್ಕೃತಿಕ ಭವನ ಶಿಕಾರಿಪುರದಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಜಿ.ಎಸ್.ಶಿವರುದ್ರಪ್ಪ ಹೆಸರನ್ನು ಇಡಲಾಗುವುದು ಎಂದರು.

ಎಐ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ನೋಡಲು ಜಿಎಸ್‍ಎಸ್ ಅವರ ಕಾವ್ಯದಿಂದ ಮಾತ್ರ ಸಾಧ್ಯ. ತಂತ್ರಜ್ಞಾನ ತಪ್ಪು ಬಳಕೆ ಆಗಬಾರದು ಎಂದರೆ ಜಿಎಸ್‍ಎಸ್ ಅವರ ಮೌಲ್ಯಗಳು ಹಾಗೂ ಅವರ ಸಾಹಿತ್ಯದ ಅಧ್ಯಯನಕ್ಕೆ ಪ್ರೇರಣೆ ನೀಡಬೇಕು ಎಂದರು.

ಫೆ.26ರಂದು ಕೇಂದ್ರ ಸಚಿವ ಮುರುಗನ್ ಆಗಮಿಸಿ, ಸಹ್ಯಾದ್ರಿ ಕಾಲೇಜಿನ ಎದುರು ಇರುವ ದೂರದರ್ಶನ ಟ್ರಾನ್ಸ್‌ಮೀಟರ್ ಸೆಂಟರ್‌ನಲ್ಲಿ ಅಳವಡಿಸಿರುವ 10 ಕೆವಿ ಎಫ್‍ಎಂ ಸ್ಟೇಷನ್‍ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇಲ್ಲಿ ನಿರ್ಮಿಸಿರುವ ಸ್ಟುಡಿಯೋವನ್ನು ಸಾಹಿತ್ಯದ ಕೆಲಸಗಳಿಗೂ ಬಳಸಬಹುದು ಎಂದರು.

ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ್ ಆರ್. ದೇಸಾಯಿ ಅಧ್ಯಕ್ಷತೆ ವಹಿಸಿ, ಆಶಯ ನುಡಿ ಆಡಿದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ನುಡಿ ಆಡಿದರು. ವಿಶ್ರಾಂತ ಪ್ರಾಂಶುಪಾಲರಾದ ಡಾ.ಸಬಿತಾ ಬನ್ನಾಡಿ, ಓ.ಎಲ್.ನಾಗಭೂಷಣಸ್ವಾಮಿ ಅವರ ಕುರಿತು ಅಭಿನಂದನಾ ನುಡಿ ಆಡಿದರು. ಜಿಎಸ್‍ಎಸ್ ಪುರಸ್ಕಾರವನ್ನು ವಿಮರ್ಶಕ ಡಾ.ಓ.ಎಲ್.ನಾಗಭೂಷಣಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು.

ಜಿಎಸ್‍ಎಸ್ ಗೀತ ಗಾಯನ ಸ್ಪರ್ಧೆಯ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿ ರಂಜನಾ ರಾನಡೆ, ದ್ವಿತೀಯ ಸ್ಥಾನ ಪಡೆದ ಸುನೈನಾ ದೇಶಪಾಂಡೆ, ತೃತೀಯ ಸ್ಥಾನ ಪಡೆದ ಸಂಧ್ಯಾ ಹೆಗ್ಡೆ, ಸಮಾಧಾನಕರ ಬಹುಮಾನವನ್ನು ಎಚ್.ಭುವನ್ ಅವರಿಗೆ ನೀಡಲಾಯಿತು. ಕರ್ನಾಟಕ ಸಂಘದಿಂದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.