ತೂಕ-ಅಳತೆಯಲ್ಲಿ ವಂಚನೆ : 4 ತಿಂಗಳಲ್ಲಿ 76 ಪ್ರಕರಣ

KannadaprabhaNewsNetwork |  
Published : Aug 10, 2025, 01:30 AM IST
2.ಬೆಂಗಳೂರು ಜಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ ಗ್ರೇಡ್ -2 ಸಹಾಯಕ ನಿಯಂತ್ರಕರಾದ ಜಿ.ಎಸ್.ಸುಜಾತರವರು ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿ ಅಳತೆ ತಪಾಸಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ವ್ಯವಹಾರದ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡಿದ ಮಾರಾಟಗಾರರ ವಿರುದ್ಧ ಸಮರ ಸಾರಿರುವ ಕಾನೂನು ಮಾಪನಶಾಸ್ತ್ರ ಇಲಾಖೆ ಕೇವಲ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಹಲವೆಡೆ ದಾಳಿ ನಡೆಸಿ 76 ಪ್ರಕರಣಗಳನ್ನು ದಾಖಲಿಸಿ 1 ಲಕ್ಷ 74 ಸಾವಿರ ರುಪಾಯಿ ದಂಡ ವಿಧಿಸಿದೆ.

ರಾಮನಗರ: ವ್ಯವಹಾರದ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡಿದ ಮಾರಾಟಗಾರರ ವಿರುದ್ಧ ಸಮರ ಸಾರಿರುವ ಕಾನೂನು ಮಾಪನಶಾಸ್ತ್ರ ಇಲಾಖೆ ಕೇವಲ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಹಲವೆಡೆ ದಾಳಿ ನಡೆಸಿ 76 ಪ್ರಕರಣಗಳನ್ನು ದಾಖಲಿಸಿ 1 ಲಕ್ಷ 74 ಸಾವಿರ ರುಪಾಯಿ ದಂಡ ವಿಧಿಸಿದೆ.

ದೋಷಪೂರಿತ ತೂಕ ಮತ್ತು ಅಳತೆ ಪರಿಕರಗಳನ್ನು ಬಳಸುವುದು, ತೂಕ ಮತ್ತು ಅಳತೆಯಲ್ಲಿ ವಂಚಿಸುವುದು, ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ವ್ಯಾಪಾರಿ ಸಂಸ್ಥೆಗಳನ್ನು ಗುರುತಿಸಿ 76 ಮೊಕದ್ದಮೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ವ್ಯಾಪಾರಸ್ಥರ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಹಠಾತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ ಆಗಸ್ಟ್ 5 ರಂದು ರಾಮನಗರದ ಮಾಗಡಿ ರಸ್ತೆಯಲ್ಲಿರುವ ವಿವಿಧ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ತಪಾಸಣೆ ನಡೆಸಿದ ಅಧಿಕಾರಿಗಳು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 6 ಮೊಕದ್ದಮೆಗಳನ್ನು ದಾಖಲಿಸಿ, 14 ಸಾವಿರ ರು. ಅಭಿಸಂಧಾನ ದಂಡ ವಸೂಲಿ ಮಾಡಿದ್ದಾರೆ.36.75 ಲಕ್ಷ ಸತ್ಯಾಪನಾ ಶುಲ್ಕ ಸಂಗ್ರಹ :

ಈ ರೀತಿ ಜಿಲ್ಲೆಯಲ್ಲಿ ಚಿಲ್ಲರೆ ಅಂಗಡಿಗಳು, ಬೇಕರಿಗಳು, ಗುಜರಿ ಮತ್ತು ಕಬ್ಬಿಣದ ಅಂಗಡಿಗಳು, ಮಾಂಸ, ಕೋಳಿ ಅಂಗಡಿ, ವೈಬ್ರಿಡ್ಜ್ , ಪೆಟ್ರೋಲ್ ಪಂಪ್ ಗಳು, ಚಿನ್ನ - ಬೆಳ್ಳಿ ಸೇರಿದಂತೆ ಇತರೆ ರೀತಿ ಕೈಗಾರಿಕಾ ಪ್ರದೇಶಗಳ ಅಂಗಡಿಗಳು ಸೇರಿ 266 ಕಡೆಗಳಲ್ಲಿ ತಪಾಸಣೆ ನಡೆಸಿ 36,75,055 ರು. ಸತ್ಯಾಪನಾ ಶುಲ್ಕ ಸಂಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 107 ಪೆಟ್ರೋಲ್ ಬಂಕ್ ಗಳಿದ್ದು, ಇದರಲ್ಲಿ 59 ಬಂಕ್ ಗಳ ತಪಾಸಣೆ ಮಾಡಲಾಗಿದೆ. ವ್ಯಾಪಾರಸ್ಥರು, ಕೈಗಾರಿಕಾ ಸಂಸ್ಥೆಗಳು ತಮ್ಮ ವಹಿವಾಟಿನಲ್ಲಿ ಉಪಯೋಗಿಸುತ್ತಿರುವ ತೂಕಗಳು, ಅಳತೆಗಳು, ತೂಕದ ಹಾಗೂ ಅಳತೆ ಸಾಧನಗಳನ್ನು ನಿಯಮಿತ ಅವಧಿಯೊಳಗೆ ಇಲಾಖೆ ವತಿಯಿಂದ ಪರಿಶೀಲಿಸಿಕೊಂಡು ಸತ್ಯಾಪನೆ ಹಾಗೂ ಮುದ್ರೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಇಲಾಖೆ ವ್ಯಾಪ್ತಿ ಏನೇನು ?

ನ್ಯಾಯಬೆಲೆ ಅಂಗಡಿ, ವ್ಯವಸಾಯ ಸೇವಾ ಸಹಕಾರ ಸಂಘ, ಕಿರಾಣಿ ಅಂಗಡಿ, ಕರ್ನಾಟಕ ಉಗ್ರಾಣ ನಿಗಮ, ಹಣ್ಣು ವ್ಯಾಪಾರಿಗಳು, ಹಾರ್ಡ್ ವೇರ್ ಮತ್ತು ಪೈಂಟ್ಸ್, ಆಟೋ ಮೊಬೈಲ್ಸ್, ಜನರಲ್ ಮರ್ಚಂಟ್ಸ್, ಮಾಲ್ಸ್, ಬಾರ್ ಆಂಡ್ ರೆಸ್ಟೊರೆಂಟ್, ವೇಬ್ರಿಡ್ಜ್, ಸಗಟು ವ್ಯಾಪಾರಿಗಳು, ಪೆಟ್ರೋಲ್ ಬಂಕ್, ಸ್ಟೆಷನರಿ, ಸಂತೆ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಜ್ಯುವೆಲರ್ಸ್ ಅಂಗಡಿಗಳು ಕಾನೂನು ಮಾಪನ ಶಾಸ್ತ್ರ ಇಲಾಖೆ ವ್ಯಾಪ್ತಿಗೆ ಬರುತ್ತವೆ.

ಸುಧಾರಿತ ತಂತ್ರಜ್ಞಾನ ಪರಿಚಯ–ಬಳಕೆ ನಡುವೆಯೂ ಜಿಲ್ಲಾದ್ಯಂತ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವುದಕ್ಕೆ ಕಡಿವಾಣ ಬಿದ್ದಿಲ್ಲ. ಗ್ರಾಹಕರು ವಂಚನೆಗೆ ಒಳಗಾಗುವುದು ಮುಂದುವರಿದೇ ಇದೆ. ಇಲಾಖೆಯವರು ಚಾಪೆ ಕೆಳಗೆ ತೂರಿದರೆ, ವರ್ತಕರು ಅಥವಾ ವ್ಯಾಪಾರಿಗಳು ರಂಗೋಲಿ ಕೆಳಗೆ ತೂರಿ ಮೊಸದ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದಾರೆ.

ಗ್ರಾಹಕರು ತೂಕ ಮತ್ತು ಅಳತೆಯಲ್ಲಿ ಮೋಸವಾಗಿರುವುದು ಕಂಡು ಬಂದಲ್ಲಿ ಧೈರ್ಯವಾಗಿ ದೂರು ಸಲ್ಲಿಸಬೇಕು ಆಗ ಮಾತ್ರ ವ್ಯಾಪಾರಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.ಬಾಕ್ಸ್ ...............

ಪೊಟ್ಟಣ ಸಾಮಗ್ರಿಗಳ ಮೇಲೆ ಈ ಅಂಶಗಳು ಕಡ್ಡಾಯ:

*ತಯಾರಕರ , ಪ್ಯಾಕರ್ , ಆಮದುದಾರರ ಹೆಸರು ಮತ್ತು ವಿಳಾಸ

*ಸಾಮಗ್ರಿ ಹೆಸರು

*ನಿವ್ವಳ ತೂಕ, ಅಳತೆ, ಸಂಖ್ಯೆ

*ತಯಾರಾದ, ಪ್ಯಾಕ್ ಮಾಡಿದ , ಆಮದು ಆಗಿರುವ ದಿನಾಂಕ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಲ್ಲ ತೆರಿಗೆ ಸೇರಿ).ಕೋಟ್ ...............

ಕಾನೂನು ಮಾಪನಶಾಸ್ತ್ರ ಇಲಾಖೆ ನೀಡಿರುವ ಸತ್ಯಾಪನಾ ಪ್ರಮಾಣ ಪತ್ರವನ್ನು ವ್ಯಾಪಾರದ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಇನ್ನೂ ಮುಂದೆ ಜಿಲ್ಲಾದ್ಯಂತ ಇದೇ ರೀತಿ ಹೆಚ್ಚಿನ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಿ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು.

-ಜಿ.ಎಸ್.ಸುಜಾತ, ಸಹಾಯಕ ನಿಯಂತ್ರಕರು ಗ್ರೇಡ್ -2, ಕಾನೂನು ಮಾಪನ ಶಾಸ್ತ್ರ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ

9ಕೆಆರ್ ಎಂಎನ್ 2,3.ಜೆಪಿಜಿ2.ಬೆಂಗಳೂರು ಜಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ ಗ್ರೇಡ್ -2 ಸಹಾಯಕ ನಿಯಂತ್ರಕರಾದ ಜಿ.ಎಸ್.ಸುಜಾತರವರು ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿ ಅಳತೆ ತಪಾಸಣೆ ಮಾಡಿದರು.3.ರಾಮನಗರದ ಹಾರ್ಡ್ ವೇರ್ ಅಂಗಡಿಯೊಂದರಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಗ್ರೇಡ್ -2 ಸಹಾಯಕ ನಿಯಂತ್ರಕರಾದ ಜಿ.ಎಸ್.ಸುಜಾತರವರು ತೂಕ ಪರಿಶೀಲನೆ ಮಾಡಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ