ಸಾಲ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಶಿರಹಟ್ಟಿ
ಪಟ್ಟಣದ ಜನತಾ ಬಜಾರ ಎದುರಿಗೆ ಶ್ರೀ ಲಕ್ಷ್ಮೀ ಎಂಟರ್ಪ್ರೈಸೆಸ್ ಹೆಸರಿನಲ್ಲಿ ಕಾರ್ಯಾಲಯ ತೆರೆದಿದ್ದು, ಕಳೆದ ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಸಂಚರಿಸಿ ಒಂದು ತಿಂಗಳ ಒಳಗೆ ಸಾಲ ಕೊಡಿಸುವುದಾಗಿ ಹೇಳಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳಡಿ ಸಬ್ಸಿಡಿ ಸಹಿತ ಸಾಲ ಸೌಲಭ್ಯ ದೊರೆಯಲಿದೆ ಎಂಬ ಭರವಸೆಯನ್ನು ನಂಬಿದ ಅನೇಕ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರು ಸಾಲದ ನಿರೀಕ್ಷೆಯಲ್ಲಿ ಹಣ ನೀಡಿದ್ದಾರೆ. ಆದರೆ, ಭರವಸೆ ನೀಡಿದಂತೆ ಸಾಲ ಕೊಡಿಸದೆ, ಪಡೆದ ಹಣವನ್ನೂ ಹಿಂದಿರುಗಿಸದೆ ಪರಾರಿಯಾಗಿದ್ದು, ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಡಿಮೆ ಬಡ್ಡಿದರದಲ್ಲಿ ಹಾಗೂ ಸಬ್ಸಿಡಿ ಸೌಲಭ್ಯದೊಂದಿಗೆ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಬೇಕು, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಣ ನೀಡಿದ್ದ ಜನರು ಇದೀಗ ಅತಂತ್ರರಾಗಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದರೆ, ಇನ್ನೂ ಕೆಲವರು ತಮ್ಮ ಕಷ್ಟದ ದುಡಿಮೆಯ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ನ್ಯಾಯ ಒದಗಿಸಲು ಆಗ್ರಹ:
ಸದ್ಯ ಸಾಲ ಕೊಡಿಸುವುದಾಗಿ ನೂರಾರು ಜನರಿಗೆ ಪಂಗನಾಮ ಹಾಕಿರುವ ವ್ಯಕ್ತಿ ಸ್ಥಳೀಯ ಪಟ್ಟಣ ಪಂಚಾಯತಿಯಿಂದ ಪರವಾನಗಿ ಪಡೆದು ಕಾರ್ಯಾಲಯ ತೆರೆಯದೇ ಅಮಾಯಕರಿಗೆ ಮೋಸ ಮಾಡಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಮುಂದೆ ಈ ಘಟನೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ತಿಳಿಯದಾಗಿದೆ.ಘಟನೆ ಕುರಿತಂತೆ ತಕ್ಷಣ ಸ್ಥಳಕ್ಕೆ ಹೋಗಿ ವಿಚಾರಿಸಿ, ವಿಷಯ ಏನೆಂದು ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳುವಂತಿದ್ದರೆ ಕೇಸ್ ಮಾಡಿಕೊಳ್ಳಲು ತಿಳಿಸುತ್ತೇನೆ.