ಕನ್ನಡಪ್ರಭ ವಾರ್ತೆ ಕಲಬುರಗಿ
ಪರಶುರಾಮ್ 2020ರಿಂದ 2024ರ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೊಡಿಸುವುದಾಗಿ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ಕಲಬುರ್ಗಿ, ಜೇವರ್ಗಿ, ಯಡ್ರಾಮಿ, ಸುರಪುರ, ಬೀದರ್ ಸೇರಿ ವಿವಿಧ ಗ್ರಾಮಗಳಲ್ಲಿನ ಸುಮಾರು 39 ಜನರಿಂದ ಹಣ ತೆಗೆದುಕೊಂಡು ತಲೆ ಮರೆಸಿಕೊಂಡಿದ್ದ. ಕೆಲವರಿಗೆ ಈತ ಚೆಕ್ಕು ಕೊಟ್ಟಿದ್ದು ಎರಡ್ಮೂರು ಚೆಕ್‍ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನೊಂದವರು ದೂರು ಸಲ್ಲಿಸಿದ್ದು, ಪೋಲಿಸರು ಆತನನ್ನು ಬೆಂಗಳೂರಿನಿಂದ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪರಶುರಾಮ್ 39 ಜನರಿಗೆ 1.50 ಕೋಟಿ ರು. ವಂಚನೆ ಮಾಡಿರೋದು ಗೊತ್ತಾಗಿದೆ. ಪ್ರಭಾವಿ ವ್ಯಕ್ತಿಗಳೂ ಸಹ ವಂಚನೆಗೆ ಒಳಗಾಗಿದ್ದಾರೆ. ಎಎಸ್‍ಐ ಸೇರಿ ಕೇಂದ್ರ ಸಚಿವರೊಬ್ಬರ ಸಂಬಂಧಿ ಸಹ ಹಣ ಕಳೆದುಕೊಂಡಿದ್ದಾರೆಂದು ವಿಚಾರಣೆ ವೇಳೆ ಬಯಲಾಗಿದೆ.ಹಣ ಕೊಟ್ಟವರಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡು ಕಣ್ಣು ತಪ್ಪಿಸಿಕೊಂಡು ಓಡಾಡಿಕೊಡಿದ್ದ. ಈತನ ಬಂಧನಕ್ಕಾಗಿ ಜೇವರ್ಗಿ ಸಿಪಿಐ ರಾಜೇಸಾಬ್ , ಪಿಎಸ್‌ಐ ಸುರೇಶ ಕುಮಾರ್ ಅವರನ್ನೊಳಗೊಂಡ ಪತ್ತೆದಳ ರಚಿಸಲಾಗಿತ್ತು.
ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೂ ಆದ ಬೀದರ್ ಸಂಸದ ಭಗವಂತ್ ಖೂಬಾ ಅವರ ಅಳಿಯ ಬಾಪುರಾವ್ ತಂದೆ ಮಾಣಿಕ್ ಅವರೂ ಸಹ ಪರಶುರಾಮ್‍ನಿಗೆ ಹದಿನೈದು ಲಕ್ಷಕ್ಕಿಂತ ಅಧಿಕ ಹಣ ಕೊಟ್ಟಿದ್ದಾರೆ. ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾನೆ ಎಂದು ಬಾಪುರಾವ್ ಅವರು ಹಣ ಕೊಟ್ಟ ಚೆಕ್‍ಗಳ ಸಮೇತ ಪೋಲಿಸರಿಗೆ ಮೊದಲ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಬಾಪುರಾವ್ ಅವರು ಕಲಬುರ್ಗಿಯಲ್ಲಿಯೇ ವಾಸವಾಗಿದ್ದು, ಪರಶುರಾಮ್ ವಂಚನೆ ಬಯಲಿಗೆಳೆದ ಮೊದಲಿಗರು ಎನ್ನಲಾಗಿದೆ.
ಪರಶುರಾಮ್ ವಂಚನೆಗೆ ಒಳಗಾದವರು: ಪರಶುರಾಮ್‍ನ ವಂಚನೆಯ ಜಾಲದಲ್ಲಿ ಎಎಸ್‍ಐ ರಮೇಶ್ ನಾರಾಯಣಪುರ ಅವರ 8.50 ಲಕ್ಷ ರು, ಶಿವುಕುಮಾರ್ ಕಾಸರಭೋಸಗಾ- 10 ಲಕ್ಷ ರು, ಲಿಂಗರಾಜ್ ಆಂದೋಲಾ 3.25 ಲಕ್ಷ ರು. ಗೌಡಪ್ಪಗೌಡ ಕಲಶೆಟ್ಟಿ 5 ಲಕ್ಷ ರು., ಮಾನಯ್ಯ ಹಣಮಯ್ಯ ಯಾಳವಾರ್ 10 ಲಕ್ಷ ರು., ರಾಜಾರಾಮಪ್ಪ ನಾಯಕ್ ಸುರಪುರ 25 ಲಕ್ಷ ರು., ಮಲ್ಲಣ್ಣ ಬಸಣ್ಣ ಲಖ್ಖಣ್ಣಿ ಆಂದೋಲಾ 4.50 ಲಕ್ಷ ರು., ನಾಸೀರ್ ಹುಸೇನ್ ಕೊಂಡಾಳ್ ಸುರಪುರ ಅವರು 11 ಲಕ್ಷ ರು., ಇಬ್ರಾಹಿಂ ಶಿರವಾಳರ 35 ಲಕ್ಷ ರು., ಭೀಮಣ್ಣ ಭಜಂತ್ರಿ 1.50 ಲಕ್ಷ ರು., ಯಲ್ಲಾಲಿಂಗ್ ಅವರಾದ್ 4.50 ಲಕ್ಷ ರು., ಕಮರಸಾಬ್ 10 ಲಕ್ಷ ರು., ದೌಲತರಾಯ್ ಸುಭಾಷ್ 3 ಲಕ್ಷ ರು. ವಂಚನೆಗೆ ಒಳಗಾದ ಪ್ರಮುಖರಾಗಿದ್ದಾರೆ. ಇದಲ್ಲದೆ ಇನ್ನೂ ಹಲವಾರು ಜನ ದೂರುಗಳನ್ನು ಸಲ್ಲಿಸಿ ಪರಶುರಾಮನಿಂದ ತಾವು ವಂಚನೆಗೊಳಗಾದ ಬಗ್ಗೆ ಮಾಹಿತಿ ಪೊಲೀಸರಿಗೆ ನೀಡಿದ್ದಾರೆ.
2ವರ್ಷ ಹಿಂದೆಯೇ ಕೆಲಸದಿಂದ ವಜಾ: ಕಳೆದ 2 ವರ್ಷದ ಹಿಂದೆಯೇ ಪರಶುರಾಮ್ ತಂದೆ ಗೌಡಪ್ಪಗೌಡ ಹಲವರಿಗೆ ಉದ್ಯೋಗ ಹಾಗೂ ಕೆಲಸದ ಆಮಿಷ ಒಡ್ಡಿ ಲಕ್ಷಾಂತರ ರು. ವಂಚಿಸಿದ ಆರೋಪದ ಕುರಿತು ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಗಮನಕ್ಕೆ ಬಂದಾಗ ಆತನಿಗೆ ವಿಚಾರಣೆಗೆ ಒಳಪಡಿಸಿ ತಕ್ಷಣವೇ ಆಪ್ತ ಸಹಾಯಕ ಹುದ್ದೆಯಿಂದ ತೆಗೆದುಹಾಕಿದ್ದರು ಎಂದು ತಿಳಿದುಬಂದಿದೆ.