ನಿವೇಶನ ಹಕ್ಕುಪತ್ರ ನೀಡದೆ ವಂಚನೆ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಆರೋಪ

KannadaprabhaNewsNetwork |  
Published : May 23, 2024, 01:03 AM IST
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌  | Kannada Prabha

ಸಾರಾಂಶ

1987-88ರಲ್ಲಿ ನನ್ನ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಂದಿನ ಸರ್ಕಾರ ತಮ್ಮನ್ನು ಮೇಲ್ಮನೆ ಸದಸ್ಯೆಯನ್ನಾಗಿ ಮಾಡಿದ್ದ ಸಂದರ್ಭದಲ್ಲಿ ಬಂಜಾರ ಸಂಘಗಳನ್ನು ಸ್ಥಾಪಿಸಿ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯದ ಗುತ್ತಲು ಗ್ರಾಮದ ಸರ್ವೇ ನಂಬರ್ 530ರಲ್ಲಿ 1.28 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಂಜಾರ ಸಮುದಾಯಕ್ಕೆ ಮಂಜೂರಾಗಿದ್ದ ನಿವೇಶನದ ಹಕ್ಕುಪತ್ರ ನೀಡದೆ ವಂಚಿಸಿರುವ ಸಮುದಾಯದ ವಂಚಕ ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವೆ ಭೇಟಿ ಲಲಿತಾ ನಾಯಕ್ ಆಗ್ರಹಪಡಿಸಿದರು.

1987-88ರಲ್ಲಿ ನನ್ನ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಂದಿನ ಸರ್ಕಾರ ತಮ್ಮನ್ನು ಮೇಲ್ಮನೆ ಸದಸ್ಯೆಯನ್ನಾಗಿ ಮಾಡಿದ್ದ ಸಂದರ್ಭದಲ್ಲಿ ಬಂಜಾರ ಸಂಘಗಳನ್ನು ಸ್ಥಾಪಿಸಿ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯದ ಗುತ್ತಲು ಗ್ರಾಮದ ಸರ್ವೇ ನಂಬರ್ 530ರಲ್ಲಿ 1.28 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣನಾಯಕ್ ಅವರಿಗೆ ಜವಾಬ್ದಾರಿ ನೀಡಿ ವಸತಿ ವ್ಯವಸ್ಥೆ ಮಾಡಿಕೊಡಲಾಯಿತು. ನಂತರ ಹತ್ತಾರು ಫಲಾನುಭವಿಗಳು ಅಲ್ಲಿ ನೆಲೆಸಿದ್ದು ಅವರೆಲ್ಲರಿಗೂ ಹಕ್ಕುಪತ್ರ ಲಭ್ಯವಾಯಿತು ಎಂದು ವಿವರಿಸಿದರು.

1998ರಲ್ಲಿ ಆ ಬಡಾವಣೆಯನ್ನು ಬಿ.ಟಿ.ಲಲಿತಾ ನಾಯಕ್ ಬಡಾವಣೆ ಎಂಬುದಾಗಿ ಮರು ನಾಮಕರಣ ಮಾಡಲಾಯಿತು. ಸಂಘದ ಮೂಲಕ ನ್ಯಾಯಬೆಲೆ ಅಂಗಡಿ ವಾಚನಾಲಯ, ಸಮುದಾಯ ಭವನ, ಅಂಗನವಾಡಿ ಕೇಂದ್ರ, ಸಂತ ಸೇವಾಲಾಲ್ ಮಂದಿರವನ್ನು ಮಂಜೂರು ಮಾಡಿಸಲಾಯಿತು. ಆದರೆ, ಕೃಷ್ಣನಾಯಕ್ ಮರಣದ ನಂತರ ಆತ ಮಾಡಿರುವ ವಂಚನೆ ಬಯಲಿಗೆ ಬಂದಿದೆ. ಅವರ ಕುಟುಂಬದವರೇ ಬಂಜಾರ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದು ಮೂರು ಲಕ್ಷ ರು. ಕೊಟ್ಟರೆ ಮಾತ್ರ ಹಕ್ಕುಪತ್ರವನ್ನು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ, ಕೆಲವರಲ್ಲಿ ಭಯ ಹುಟ್ಟಿಸುತ್ತಿ ದಾರಿ ಎಂದು ದೂರಿದರು.

ಕೃಷ್ಣ ನಾಯಕ್ ಅವರ ಪತ್ನಿ ಮಂಗಳಮ್ಮ ಈಗಿನ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಸ್ವಯಂ ಘೋಷಿತ ಅಧ್ಯಕ್ಷರಾಗಿ ಅವರ ತಂಗಿಯ ಮಗ ವೆಂಕಟ ನಾಯಕ, ಖಜಾಂಚಿಯಾಗಿ ಮಗ ನಂದರಾಜ ನಾಯಕ, ಸಹ ಕಾರ್ಯದರ್ಶಿಯಾಗಿ ಅಳಿಯ ಕುಮಾರ ನಾಯಕ, ಸಂಘಟನಾ ಕಾರ್ಯದರ್ಶಿಯಾಗಿ ಅಣ್ಣನ ಮಗ ರಮೇಶ ನಾಯಕ, ಸದಸ್ಯರಾಗಿ ಮಮತಾ ಮತ್ತು ಅನಿತಾಭಾಯಿ ಅವರಿದ್ದು ಇವರೆಲ್ಲರೂ ವಂಚನೆ ಮಾಡಿದ್ದಾರೆ. ಆದಕಾರಣ ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಂಡು ಉಗ್ರಶಿಕ್ಷೆ ನೀಡಬೇಕು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ ಖಾತೆಗಳನ್ನು ಮಾಡಬೇಕು. ಅವರು ಪಡೆದಿರುವ ಹಣವನ್ನು ವಾಪಸ್ ನೀಡಬೇಕು. ಬೇರೆ ಸಮುದಾಯದವರು ಆಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ಪಡಿಸಿದರು.

ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಿ.ಎಂ.ಶಿವಕುಮಾರ್ ನಾಯಕ್, ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷ ತಿಪ್ಪ ಚನ್ನನಾಯಕ, ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂ.ಕೆ.ಬಾಲರಾಜ್, ಕರ್ನಾಟಕ ಬಂಜಾರ ಜಾಗೃತಿ ದಳದ ಮಹೇಶ್ ನಾಯಕ, ಮುಖಂಡರಾದ ಪುಟ್ಟಸ್ವಾಮಿ, ಶೀನಾ ನಾಯಕ್, ವಿವೇಕ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!