ನ್ಯಾಯಕ್ಕಾಗಿ ಹೋರಾಟಕ್ಕೆ ಅನುಮತಿ ಕೇಳಿದವರಿಗೇ ಬೆದರಿಕೆ: ಎಸ್.ಬಿ. ವಿಶ್ವಾಸ್ ಆರೋಪಕನ್ನಡಪ್ರಭ ವಾರ್ತೆ ಹಾಸನಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ವಿವಿಧ ಗ್ರಾಹಕರಿಂದ ಸುಮಾರು 4ರಿಂದ 5 ಕೋಟಿ ರುಪಾಯಿವರೆಗೆ ಹಣ ಸಂಗ್ರಹಿಸಿ ಮೋಸ ಮಾಡಿ ಪರಾರಿಯಾಗಿರುವ ಆರೋಪದಡಿ ಸುರ್ಯೋದಯ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ಪೂಜಾ ಎಚ್. ಎಸ್. ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಪೊಲೀಸ್ ಠಾಣೆಯಲ್ಲಿ ಅನುಮತಿ ಕೇಳಲು ಹೋದರೆ ಕೆಲ ಪೊಲೀಸರ ಹೆಸರು ಕೈಬಿಟ್ಟರೇ ಅನುಮತಿ ಕೊಡುವುದಾಗಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ಮೋಸ ಹೋದವರ ಪರವಾಗಿ ಎಸ್. ಬಿ. ವಿಶ್ವಾಸ್ ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಪೆನ್ನನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಿನಾಂಕ 1/3/2026ರಂದು ಕ್ರೈ ನಂ.0037/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಲವು ಕುಟುಂಬಗಳು ತಮ್ಮ ಜೀವನಪೂರ್ತಿ ಸಂಗ್ರಹಿಸಿದ್ದ ಹಣವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದಾಗಿ ದೂರಿದರು. ಸಬ್ಸಿಡಿ ಲೋನ್, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರುಪಾಯಿ ಹಣ ಪಡೆದು ಬಳಿಕ ಸಂಪರ್ಕ ಕಡಿತಗೊಳಿಸಿ ಪರಾರಿಯಾಗಿರುವುದಾಗಿ ಆರೋಪಿಸಿದರು. ನೊಂದ ಕುಟುಂಬಗಳ ಆರೋಪದ ಪ್ರಕಾರ, ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯೊಂದಿಗಿನ ಸಂಪರ್ಕ ಹೊಂದಿದ್ದ ಪ್ರವೀಣ್ ಎಂಬ ಪೊಲೀಸ್ ಸಿಬ್ಬಂದಿಯ ಪಾತ್ರವೂ ಅನುಮಾನಾಸ್ಪದವಾಗಿದ್ದು, ಅವರ ವಿರುದ್ಧವೂ ದೂರು ಸಲ್ಲಿಸಲಾಗಿದೆ. ಆದರೆ ಪ್ರಕರಣ ದಾಖಲಾಗಿದ್ದು ಹಲವು ತಿಂಗಳುಗಳಾದರೂ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ವಿಚಾರವಾಗಿ ದಿನಾಂಕ 16/5/2026ರಂದು ಹಾಸನ ನಗರ ಪೊಲೀಸ್ ಠಾಣೆಗೆ ತೆರಳಿ ಶಾಂತಿಯುತ ಮುಷ್ಕರಕ್ಕೆ ಅನುಮತಿ ಕೋರಿ ಮನವಿ ಸಲ್ಲಿಸಲು ಹೋದ ವೇಳೆ ಭಾನು ಎಂಬ ಪೊಲೀಸ್ ಅಧಿಕಾರಿ ಪೊಲೀಸ್ ಸಿಬ್ಬಂದಿಯ ಹೆಸರನ್ನು ಕೈಬಿಟ್ಟರೆ ಮಾತ್ರ ಅನುಮತಿ ನೀಡಲಾಗುವುದು ಎಂದು ಹೇಳಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಬರವಣಿಗೆ ರೂಪದಲ್ಲಿ ನೀಡುವಂತೆ ಕೇಳಿದಾಗ, ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ಹೆದರಿಸಿ ಕಳುಹಿಸಲಾಗಿದೆ ಎಂದರು.ಈ ಘಟನೆಯಿಂದ ನೊಂದ ಕುಟುಂಬಗಳಲ್ಲಿ ಇನ್ನಷ್ಟು ಅಸಮಾಧಾನ ಉಂಟಾಗಿದ್ದು, ನ್ಯಾಯಕ್ಕಾಗಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಒಂದಾಗಿ ಹೋರಾಟಕ್ಕೆ ಮುಂದಾಗಿದ್ದು, ಕೆಆರ್‌ಎಸ್ ಪಕ್ಷದ ಸಹಯೋಗದೊಂದಿಗೆ ದಿನಾಂಕ 19/5/2026ರಂದು ಹಾಸನದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ತಿಳಿಸಿದರು.