ಮಂಡ್ಯ ಮಂಜುನಾಥ
ಲೋಕಾಯುಕ್ತರ ಕಾರ್ಯಾಚರಣೆಯನ್ನು ಕಣ್ಣಾರೆ ಕಂಡಿದ್ದ ಜನರಿಗೆ ಉಪ ಲೋಕಾಯುಕ್ತರ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನು ತಮ್ಮ ಕಾರ್ಯಶೈಲಿ ಮೂಲಕ ಸಾಧಿಸಿ ತೋರಿಸಿದವರು ಬಿ.ವೀರಪ್ಪ. ಇಷ್ಟು ದಿನ ಉಪ ಲೋಕಾಯುಕ್ತರನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದ ವರ್ಷ ಮೇ ತಿಂಗಳ ಅಂತ್ಯದಲ್ಲಿ ಬಿ.ವೀರಪ್ಪನವರು ಮಂಡ್ಯದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಉಪ ಲೋಕಾಯುಕ್ತರ ಪವರ್ ಏನೆಂಬುದು ಸಾರ್ವಜನಿಕವಾಗಿ ಬಹಿರಂಗಗೊಂಡಿತು.
ಮೇ 21ರಿಂದ ಮತ್ತೆ ಮಂಡ್ಯದಲ್ಲಿ ಉಪ ಲೋಕಾಯುಕ್ತರ ಸೆಕೆಂಡ್ ಇನ್ನಿಂಗ್ಸ್ ಶುರುವಾಗಲಿದೆ.ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುತ್ತಿರುವ ಭ್ರಷ್ಟ ಆಡಳಿತ, ತಾಲೂಕು ಪಂಚಾಯ್ತಿ ಅಧಿಕಾರಿಗಳ ಅಧಿಕಾರ ದುರ್ಬಳಕೆ, ಕರ್ತವ್ಯಲೋಪ, ಬೇಜವಾಬ್ದಾರಿತನ, ದಾಖಲೆಗಳನ್ನು ಸಂರಕ್ಷಿಸಿಡುವಲ್ಲಿ ವೈಫಲ್ಯ ಸೇರಿದಂತೆ ಅಕ್ರಮಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದರು. ಅಧಿಕಾರಿಗಳನ್ನು ನೇರಾ ನೇರಾ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದರು. ಹಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ತ್ವರಿತ ವಿಚಾರಣೆ ನಡೆಸಿದರು. ಕರ್ತವ್ಯಲೋಪವೆಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಿದರು. ಹೀಗೆ ನಾನಾ ರೀತಿಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ಉಪ ಲೋಕಾಯುಕ್ತ ಸ್ಥಾನದ ಘನತೆ-ಗೌರವಗಳನ್ನು ಹೆಚ್ಚಿಸಿದರು.
ಸಾರ್ವಜನಿಕರ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಿ ನ್ಯಾಯ ದೊರಕಿಸುವ ಮೂಲಕ ಲೋಕಾಯುಕ್ತ ಸಂಸ್ಥೆ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಮೂಡುವಂತೆ ಮಾಡಿದ್ದರು. ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ವೆಂಕಟಾಚಲ, ಸಂತೋಷ್ ಹೆಗ್ಡೆ ಅವರ ಬಳಿಕ ಉಪ ಲೋಕಾಯುಕ್ತ ಹುದ್ದೆಯಲ್ಲಿದ್ದುಕೊಂಡು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದವರು ಬಿ.ವೀರಪ್ಪ ಮಾತ್ರ. ಅಲ್ಲದೇ, ಉಪ ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯ ಬಗ್ಗೆ ಎಲ್ಲರಿಗೂ ಅರಿವು ಮೂಡುವಂತೆ ಮಾಡಿದರು.
ತೆರೆ ಮರೆಯ ಹಗರಣಗಳು ಬೆಳಕಿಗೆ:
ಅದೇ ರೀತಿ ತಗ್ಗಹಳ್ಳಿ ಗ್ರಾಪಂನಲ್ಲಿ ಮೂರೇ ದಿನದಲ್ಲಿ ೫೪ ಲಕ್ಷ ರು. ಅಕ್ರಮ ಹಣ ಪಾವತಿಯ ಬಗ್ಗೆಯೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪಂಚಾಯ್ತಿ ಅಧಿಕಾರಿಗಳು ಮತ್ತು ನೌಕರರಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ.
ಕಳೆದ ವರ್ಷ ಮೇ ೨೮ರಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂಡುವಾಳು, ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಅಕ್ರಮವಾಗಿ ಇ-ಸ್ವತ್ತುಗಳನ್ನು ವಿತರಿಸಿರುವುದನ್ನು ಪತ್ತೆಹಚ್ಚಿದ್ದರು. ಇ-ಸ್ವತ್ತಿಗೆ ಸಂಬಂಧಿಸಿದ ಸಾವಿರಾರು ಕಡತಗಳು ಮಾಯವಾಗಿದ್ದನ್ನು ಬಯಲಿಗೆಳೆದಿದ್ದರು. ಈ ಎರಡೂ ಪ್ರಕರಣಗಳ ಮಾದರಿಯಲ್ಲೇ ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಸಂತೆಕಸಲಗೆರೆ, ಬೇವಿನಹಳ್ಳಿ, ಬೇಲೂರು, ಹಳುವಾಡಿ, ತಗ್ಗಹಳ್ಳಿ, ತೂಬಿನಕೆರೆ, ಸಾತನೂರು, ಬೂದನೂರು, ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲೂ ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿವೆ. ಇಲ್ಲಿಯೂ ಅಕ್ರಮ ಇ-ಸ್ವತ್ತುಗಳ ವಿತರಣೆಯಾಗಿರುವುದಾಗಿ ದೂರುಗಳು ಕೇಳಿಬಂದಿರುವುದರಿಂದ ಈ ಪಂಚಾಯ್ತಿಗಳಲ್ಲೂ ತನಿಖೆ ನಡೆಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಮೂವರು ವೈದ್ಯರ ಬಂಧನ ಅಪರೂಪದ ಪ್ರಕರಣ:
ಕಳೆದೊಂದು ವರ್ಷದ ಬಳಿಕ ಇದೀಗ ಎರಡನೇ ಬಾರಿಗೆ ಮೇ ೨೧ರಿಂದ ಉಪ ಲೋಕಾಯುಕ್ತರು ಎರಡು ದಿನಗಳ ಕಾಲ ಮತ್ತೆ ಮಂಡ್ಯದಲ್ಲಿ ನೆಲೆಯೂರಿ ಸಾರ್ವಜನಿಕರ ದೂರುಗಳನ್ನು ಆಲಿಸಲಿದ್ದಾರೆ. ಈ ಬಾರಿ ಎಲ್ಲೆಲ್ಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವರೋ ಎಂಬುದು ಮಾತ್ರ ನಿಗೂಢವಾಗಿದೆ. ಉಪ ಲೋಕಾಯುಕ್ತರ ಭೇಟಿ ಹಲವು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವುದಂತೂ ಸತ್ಯ.
ಹೊಸ ದೂರುಗಳಿಗೆ ಅವಕಾಶವಿರುವುದಿಲ್ಲ: ಎಸ್.ಸುರೇಶ್ಬಾಬುಮೇ ೨೧ ಮತ್ತು ೨೨ರಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಈಗಾಗಲೇ ದಾಖಲಾಗಿರುವ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಮತ್ತು ಮಳವಳ್ಳಿ ತಾಲೂಕಿಗೆ ಸಂಬಂಧಿಸಿದ ದೂರುಗಳನ್ನು ಮಾತ್ರ ವಿಚಾರಣೆಗೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಲೋಕಾಯುಕ್ತ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿರುವ ದೂರುದಾರರು ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶವಿರುತ್ತದೆ. ಸಾರ್ವಜನಿಕರ ಹೊಸ ದೂರುಗಳನ್ನು ಸಭೆಯಲ್ಲಿ ಸ್ವೀಕರಿಸಲಾಗುವುದಿಲ್ಲ. ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ಎಂದಿನಂತೆ ಪೊಲೀಸ್ ಅಧೀಕ್ಷಕರ ಕಚೇರಿ, ಕರ್ನಾಟಕ ಲೋಕಾಯುಕ್ತ, ಮಂಡ್ಯ ಇಲ್ಲಿಗೆ ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದು ಎಂದು ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಸುರೇಶ್‌ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.