ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಆಧಾರ್ ಮಾಹಿತಿ ಅಪ್‌ಡೇಟ್‌ ಕುರಿತು ‘ಬಾಡಿಗೆದಾರರು’ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ

ಬೆಂಗಳೂರು : ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಆಧಾರ್ ಮಾಹಿತಿ ಅಪ್‌ಡೇಟ್‌ ಕುರಿತು ‘ಬಾಡಿಗೆದಾರರು’ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಹಿಂದೆ ವಾಸವಿದ್ದ ಬಾಡಿಗೆದಾರರ ಆಧಾರ್ ಮಾಹಿತಿ ತೆರವಿನಿಂದ ತಮಗೆ ಈಗ ಸಿಗುತ್ತಿರುವ ಯೋಜನೆಯ ಅನುಕೂಲ ನಿಲ್ಲಲಿದೆಯೇ ಎಂಬ ಆತಂಕ ಅನೇಕರಲ್ಲಿ ಇರುವುದರಿಂದ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.

ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತಾರೆ

ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿದಾಗ ಹಳೇ ಬಾಡಿಗೆದಾರರ ಆಧಾರ್ ವಿವರ ತೆಗೆದು, ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತಾರೆ. ಹಾಗಾಗಿ, ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.

ವಿವರ ಬದಲಿಸಲು ಎಲ್ಲೂ ಹೋಗಬೇಕಿಲ್ಲ:

ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಯಾವುದೇ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ನಿಮ್ಮ ಆಧಾರ್ ಮತ್ತು ಬಾಡಿಗೆ, ಲೀಸ್ ಕರಾರು ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬೆಸ್ಕಾಂ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು. 

ಈ ಕುರಿತು ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆಂಬಲಿಸಬೇಕೆಂದು ಬೆಸ್ಕಾಂ ಕೋರಿದೆ. ಹೆಚ್ಚಿನ ಮಾಹಿತಿಗೆ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಕ್ಕೆ ಸಂಪರ್ಕಿಸಬಹುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.