ರಜಾ ದಿನವಾದ ಭಾನುವಾರವೂ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ರಾಜರಾಜೇಶ್ವರಿ ನಗರ 5ನೇ ಹಂತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪಾಲಿಕೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವಂತೆ ಕೋರಿದ್ದಾರೆ.

ಬೆಂಗಳೂರು : ರಜಾ ದಿನವಾದ ಭಾನುವಾರವೂ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ರಾಜರಾಜೇಶ್ವರಿ ನಗರ 5ನೇ ಹಂತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪಾಲಿಕೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವಂತೆ ಕೋರಿದ್ದಾರೆ.

 ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಾಪಾರಿಗಳು ಸ್ಥಳದಲ್ಲೇ ಪ್ರತಿಭಟನೆಗೆ ಕುಳಿತರು. ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿರುವ ನಾವು ಎಲ್ಲಿಗೆ ಹೋಗಬೇಕು? ನಮಗೆ ಫುಟ್‌ಪಾತ್ ವ್ಯಾಪಾರವೇ ಉಪಜೀವನಕ್ಕೆ ದಾರಿಯಾಗಿದೆ ಎಂದು ಪಟ್ಟು ಹಿಡಿದರು.

ನಾಗರಿಕ ಪ್ರಜ್ಞೆ ಇಲ್ಲ ಎಂದು ಮಜುಂದಾರ್‌ ಕಿಡಿ

ಫುಟ್‌ಪಾತ್ ಮೇಲೆ ಕಾರು ನಿಲ್ಲಿಸಿ, ವೈರ್ ಸಹಿತ ರೋಡ್ ಕೋನ್ ಹಾಕಿಕೊಂಡಿರುವ ಫೋಟೋವೊಂದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ಕಿರಣ್ ಮಜುಂದಾರ್‌ ಶಾ ‘ನಾಚಿಕೆಯಿಲ್ಲದ ನಡವಳಿಕೆ, ನಾಗರಿಕ ಪ್ರಜ್ಞೆಯೇ ಇಲ್ಲ’ ಎಂದು ಕಿಡಿ ಕಾರಿದ್ದಾರೆ. 

ಫುಟ್‌ಪಾತ್ ಮೇಲೆ ಐಷಾರಾಮಿ ಬೆಂಜ್ ಕಾರು

 ಇಂದಿರಾನಗರ 1ನೇ ಹಂತದ 5ನೇ ಮುಖ್ಯ ರಸ್ತೆಯಲ್ಲಿ ಮನೆ ಎದುರಿನ ವಿಶಾಲವಾದ ಫುಟ್‌ಪಾತ್ ಮೇಲೆ ಐಷಾರಾಮಿ ಬೆಂಜ್ ಕಾರು ನಿಲ್ಲಿಸಲಾಗಿದೆ. ಅಲ್ಲಿಗೆ ಬೇರೆ ಕಾರು ಹತ್ತಿರವೂ ಸುಳಿಯಬಾರದು ಎಂದು ವೈರ್ ಸಹಿತ ರೋಡ್ ಕೋನ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಖಾಸಗಿ ಎಂಬಂತೆ ಬಳಸಿಕೊಳ್ಳುತ್ತಿರುವುದಕ್ಕೆ ನಾಗರಿಕರು ತೀವ್ರವಾಗಿ ಟೀಕಿಸಿದ್ದಾರೆ. ಇಂತಹ ವ್ಯಕ್ತಿಗಳ ಒತ್ತುವರಿ ತೆರವುಗೊಳಿಸುವಿರಾ ಎಂದು ಅನೇಕರು ಪ್ರಶ್ನಿಸಿದ್ದಾರೆ.