ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಗಮನ ಸೆಳೆಯುವ ಪ್ರಧಾನ ಪಾತ್ರ ನಿರ್ವಹಿಸ್ತಿರೋ ಕಲಬುರಗಿ ಲೀಡರ್ ಮಂದಿ ಸ್ಟ್ರಾಂಗ್ ಮಾತಾಡ್ತಾರೋ, ಇಲ್ವೋ? ತಮ್ಮನ್ನ ಆರಿಸಿ ಕಳಿಸಿದ ಜನರ ಸಮಸ್ಯೆಗೆ ಅವರು ಗಟ್ಟಿ ದನಿ ಆಗೋದಿಲ್ವಾ?
ಇಂಥದ್ದೊಂದು ಡೌಟು ಕಲಬುರಗಿ ಸುದ್ದಿ ಶೂರರಿಗೆ ಇದೆ. ಆದರೆ, ಕಲಬುರಗಿಯ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಮಾತ್ರ ಈ ಡೌಟ್‌ಗೆ ಅರ್ಥವೇ ಇಲ್ಲ. ಏಕೆಂದರೆ ಕಲಬುರಗಿ ಅಭಿವೃದ್ಧಿ ಪಥದಲ್ಲಿದೆ. ಇದಕ್ಕೆ ಬಿಸಿಲೂರಿನ ನಾಯಕರ ಸೇವೆಯೂ ಕಾರಣ.
ಇಂಥದ್ದೊಂದು ಡೌಟು, ಅದಕ್ಕೆ ಮಾರ್ ಏಟು ದೊರಕಿದ್ದು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾದ ನಂತರ ಶರಣಪ್ರಕಾಶ ಪಾಟೀಲರು ಜಿಲ್ಲೆಯಲ್ಲಿ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ.
ಮಹಾರಾಷ್ಟ್ರದಿಂದ ಭೀಮಾ ನೀರಿನ ಪಾಲು ಕೇಳಿ ಪಡೆವಲ್ರಿ, ನೀರಿನ ವಿಚಾರದಾಗ ಕಾವೇರಿ ತೀರದ ಜನನಾಯಕರನ್ನು ಹೋಲಿಸಿದ್ರೆ ಕಲಬುರಗಿ ಲೀಡರ್ ಮಂದಿ ತುಸು ಡಲ್, ನಮ್ಮ್ಕಡಿ ಲೀಡರ್ ಮಂದಿ ಯಾರೂ ಸ್ಟ್ರಾಂಗ್ ಮಾತೇ ಆಡೋದಿಲ್ಲ, ಹೀಂಗಾಗಿ ನಮ್ಗ ಕಾಡೋ ಸಮಸ್ಯೆ ಹಂಗೇ ನಮ್ಮನ್ನ ಬಿಡದ್ಹಂಗೇ ಅಟಕಾಯಿಸಿಕೊಂಡಿರ್ತವೆ... ಎಂಬುದು ಪತ್ರಕರ್ತರ ಸವಾಲಿನ ರೂಪದ ಪ್ರಶ್ನೆ.
ಇದಕ್ಕೆ ಸಚಿವರು- ಅಲ್ರಿ, ನೀವು ಹೇಳ್ದಂಗ ಸ್ಟ್ರಾಂಗ್ ಮಾತಾಡ್ಬೇಕೆಂದ್ರ ನಾವೇನ್ ಕಿರುಚಬೇಕಾ? ಕೂಗಾಡಬೇಕಾ? ಎಲ್ಲಿ ಏನ್ ಮಾತಾಡ್ಬೇಕು ಮಾತಾಡ್ತೇವೆ, ನೀವೇನು ಅಪೊಜಿಷನ್ ಥರಾ ಸ್ಟೇಟ್ಮೆಂಟ್ ಕೊಡ್ತಿದ್ದೀರಲ್ಲಾ... ನಮ್ಮ ಜನರ , ನಮ್ಮ ಭಾಗದ ಸಮಸ್ಯೆ ಎಲ್ಲಿ ಯಾವಾಗ ಹೇಗೆಲ್ಲಾ ಪ್ರಸ್ತಾಪಿಸಿ ಪರಿಹಾರ ಕಂಡಕೋ ಬೇಕೆಂಬುದು ಗೊತ್ತಿದೆ, ಅದ್ಕೇ ನಾನು 4ನೇ ಬಾರಿ ಸಚಿವ, ಜಿಲ್ಲೆಯ ಅನೇಕರು ಸಚಿವರಾಗಿ, ಶಾಸಕರಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡೋದ್ರಿಂದ್ಲೇ ಕಲಬುರಗಿ ಪ್ರಗತಿ ಪಥದಲ್ಲಿ ಹೊಂಟಿದೆ... ಎಂದೆಲ್ಲಾ ಸಚಿವರು ತಮ್ಮನ್ನೂ ಸೇರಿಸಿಕೊಂಡು ಉಳಿದೆಲ್ಲಾ ಲೀಡರ್‌ಗಳಿಂದ ಅದ್ಹೇಗೆ ಬಿಸಿಲೂರು ಕಲಬುರಗಿ ಡೆವಲಪ್‌ಮೆಂಟ್ ಆಗ್ತಿದೆ ಅನ್ನೋದನ್ನು ತುಂಬಾ ಸ್ಟ್ರಾಂಗ್ ಆಗಿ ಹೇಳಿದರು.
ಈ ವಾದ-ಪ್ರತಿವಾದದ ಬಗ್ಗೆ ತೀರ್ಪನ್ನು ಕಲಬುರಗಿ ಮಹಾಜನತೆಯೇ ನೀಡಬೇಕು.
ಸಹೃದಯ ಮನುಷ್ಯ ಎಂದರಲ್ಲ.... ಅಷ್ಟೇ ಸಾಕು...
ಪತ್ರಿಕಾಗೋಷ್ಠಿ ಅಥವಾ ಸಭೆಗಳಲ್ಲಿ ಕಾಂಗ್ರೆಸ್ ವಿಚಾರ ಬಂದರೆ ಈಶ್ವರಪ್ಪನವರಿಗೆ ಅದೆಲ್ಲಿಂದಲೋ ಸಿಟ್ಟು, ಆಕ್ರೋಶ ಗರಿಗೆದರುತ್ತದೆ. ಯದ್ವಾ ತದ್ವಾ ಹರಿ ಹಾಯುತ್ತಾರೆ. ಆದರೆ, ಅದರ ಹೊರತಾದ ಕಡೆಗಳಲ್ಲಿ ಎಲ್ಲರ ಬಗೆಗೂ ಅವರೊಂದು ರೀತಿಯ ಸ್ನೇಹ ಪರತೆಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಾರೆ.
ಹಾಗೆಯೇ ಈಶ್ವರಪ್ಪನವರ ವಿಚಾರ ಬಂದರೆ ಕಾಂಗ್ರೆಸ್ಸಿಗರೂ ಅಷ್ಟೇ. ಎಲ್ಲ ಸಿಟ್ಟು, ಆಕ್ರೋಶವನ್ನು ಹೊರ ಹಾಕಿ ಬಿಡುತ್ತಾರೆ. ಮುಖಾ ಮೂತಿ ನೋಡದೆ ಬಯ್ಯುತ್ತಾರೆ.
ಇತ್ತೀಚೆಗೆ ಪತ್ರಿಕಾಭವನದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿ ಮುಗಿಸಿ ಹೊರ ಬರುತ್ತಿದ್ದಂತೆ ಮುಂದಿನ ಪತ್ರಿಕಾಗೋಷ್ಠಿಗೆಂದು ಆಗಮಿಸಿದ ಈಶ್ವರಪ್ಪ ಪರಸ್ಪರ ಎದುರಾದರು. ಸುಮ್ಮನೆ ನಕ್ಕು ಮುಂದೆ ಹೊರಟರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಟೀಕಿಸಿ ಇಂದಿಗೂ ಹರಿಜನರನ್ನು ದೇವಸ್ಥಾನದ ಒಳಗೆ ಬಿಡದೆ ಅವರನ್ನು ತುಳಿಯಲು ಕೆ.ಎಸ್.ಈಶ್ವರಪ್ಪನವರಂಥ ಸಂತತಿಗಳೇ ಕಾರಣ ಎನ್ನುತ್ತಲೇ, ಈಶ್ವರಪ್ಪ ಸಹೃದಯದ ಮನುಷ್ಯ. ಆದರೆ, ಮಾಧ್ಯಮ ಹಾಗೂ ವೇದಿಕೆಗಳು ಕಂಡರೆ ಅವರ ನಾಲಿಗೆ ನಿಲ್ಲುವುದಿಲ್ಲ. ತಮಗೆ ತೋಚಿದಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರನ್ನು ಟೀಕೆ ಮಾಡುತ್ತಿದ್ದರು. ಈಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದೆಲ್ಲ ಹೇಳಿದರು.
ಬಳಿಕ ನಡೆದ ಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ಇದೇ ವಿಚಾರವಾಗಿ ಪತ್ರಕರ್ತರೊಬ್ಬರು ಕೆಣಕಿದರು. ಅದಕ್ಕೆ ಈಶ್ವರಪ್ಪ ಅವರು ಕಿಮ್ಮನೆ ರತ್ನಾಕರ್ ಬಗ್ಗೆ ನಾನೇನು ಹೇಳಲ್ಲ. ಕೆ.ಎಸ್.ಈಶ್ವರಪ್ಪ ಸಹೃದಯದ ಮನುಷ್ಯ ಎಂದರಲ್ಲ, ಅಷ್ಟು ಸಾಕಲ್ಲವೇ ಎಂದು ನಕ್ಕರು.
ಆ ಸದಸ್ಯೆಗೆ ಹೆರಿಗೆಯಾಗಿದ್ದು, ನನಗೆ ಗೊತ್ತಿಲ್ಲ ರ್ರಿ...!
ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ನೀಡಿದ ಸ್ಪಷ್ಟನೆ.
ಆಗಿದ್ದೇನಪ್ಪಾ ಅಂದ್ರೆ... ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಸದಸ್ಯೆಯೊಬ್ಬರು ಸೇರಿ ಮೂವರು ಗೈರಾಗಿದ್ದರು. ಆಗ ಯಾರ್‍ಯಾರು ಗೈರಾಗಿದ್ದಾರೋ ಅವರ ಹೆಸರು ಕೇಳಲು ಅಧಿಕಾರಿಯೊಬ್ಬರ ಬಳಿ ಪತ್ರಕರ್ತರು ತೆರಳಿದ್ದರು. ಅಧಿಕಾರಿ, ಇಂತಿಂಥವರು ಗೈರಾಗಿದ್ದಾರೆ ಎಂದು ತಿಳಿಸಿದರು.
ಅದಕ್ಕೆ ಪತ್ರಕರ್ತರೊಬ್ಬರು, ಆ ಸದಸ್ಯೆಗೆ ಹೆರಿಗೆ ಆಗಿದೆಯಂತೆ. ಅದಕ್ಕೆ ಗೈರಾಗಿದ್ದಾರಂತೆ ಹೌದಾ? ಎಂದು ಕೇಳೋದಾ? ಈ ಪ್ರಶ್ನೆ ಕೇಳುತ್ತಿದ್ದಂತೆ ಆ ಅಧಿಕಾರಿ ಕಕ್ಕಾಬಿಕ್ಕಿ. ಬಳಿಕ ಅವರು ನಗುತ್ತಲೇ, ಆ ಸದಸ್ಯೆಗೆ ಹೆರಿಗೆಯಾಗಿದ್ದು ನನಗೇನು ಗೊತ್ತಿಲ್ಲ ಬಿಡ್ರಿ.. ಅವರು ಚುನಾವಣೆಗೆ ಹಾಜರಾಗಿಲ್ಲ ಅನ್ನುವುದಷ್ಟೇ ನನಗೆ ಗೊತ್ತು ಎಂದು ಸ್ಪಷ್ಟನೆ ನೀಡುತ್ತಾ ಅಲ್ಲಿಂದ ಕಾಲ್ಕಿತ್ತರು.
-ಶೇಷಮೂರ್ತಿ ಅವಧಾನಿ
-ಗಣೇಶ್ ತಮ್ಮಡಿಹಳ್ಳಿ
-ಶಿವಾನಂದ ಗೊಂಬಿ
