ಕೊಟ್ಯಂತರ ರೂಪಾಯಿ ಪಂಗನಾಮ ಹಾಕಿದ ನಕಲಿ ಕಂಪನಿ

KannadaprabhaNewsNetwork |  
Published : Oct 17, 2026, 02:15 AM IST
ಪೊಟೋ- ಲಕ್ಷ್ಮೀ ಎಂಟರ್ ಪ್ರೈಸಸ್ ನೀಡಿ ಬೋಗಸ್ ಚಕ್, ಪೊಟೋ- ಬೀಗ ಜಡಿದ ಕಂಪನಿಯ ನಕಲಿ ಕಂಪನಿ ಬಾಗಿಲು. ಪೊಟೋ- ಜನರಿಗೆ ಹಂಚಿರುವ ಬೋಗಸ್ ಕರಪತ್ರ  | Kannada Prabha

ಸಾರಾಂಶ

ಸಾವಿರಾರು ಜನರಿಗೆ ಮೋಸದ ಚೆಕ್ ನೀಡಿದ ಕಂಪನಿಯ ಮಾಲೀಕ, ಕಳೆದ ಒಂದು ವಾರದಿಂದ ಶಾಖೆಗೆ ಬೀಗ ಜಡಿದು ಪರಾರಿ

ಅಶೋಕ ಡಿ. ಸೊರಟೂರ ಲಕ್ಷ್ಮೇಶ್ವರ

ಪ್ರಧಾನಮಂತ್ರಿ ಉದ್ಯೋಗ ಸೃಜನ್ ಯೋಜನೆ ಅಡಿಯಲ್ಲಿ ಸಹಾಯಧನದೊಂದಿಗೆ ಸಾಲ ಸೌಲಭ್ಯ ಕೊಡಿಸುವುದಾಗಿ ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಸವಣೂರು ತಾಲೂಕಿನ ಸಾವಿರಾರು ಜನರಿಗೆ ಕೋಟ್ಯಂತರ ರುಪಾಯಿ ಪಂಗನಾಮ ಹಾಕಿ ಕಂಪನಿಯ ಮಾಲೀಕ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಕ್ಷ್ಮೇಶ್ವರ ಪಟ್ಟಣದ ಮಹಾಕವಿ ಪಂಪ ವೃತ್ತದ ಹತ್ತಿರ ಇರುವ ಲಕ್ಷ್ಮೀ ಎಂಟರ್‌ಪ್ರೈಸಸ್ ಎನ್ನುವ ನಕಲಿ ಶಾಖೆ ತೆರೆದು ಪ್ರಧಾನಮಂತ್ರಿ ಉದ್ಯೋಗ ಸೃಜನ್ ಯೋಜನೆ ಅಡಿಯಲ್ಲಿ ವಿವಿಧ ಬ್ಯಾಂಕುಗಳಿಂದ ಸಬ್ಸೀಡಿ ದರದಲ್ಲಿ ಸ್ವ ಉದ್ಯೋಗ ಮಾಡಲು ₹೧೫ರಿಂದ ₹೨೫ ಲಕ್ಷ ಸಾಲ ಕೊಡಿಸುವುದಾಗಿ ಹೇಳಿ, ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರಿಂದ ₹೧೫, ೨೦ ಹಾಗೂ ೨೫ ಸಾವಿರ ಹಣ ಮುಂಗಡ ಪಡೆದುಕೊಂಡಿದ್ದಾರೆ. ತಾವು ಮುಂಗಡವಾಗಿ ಪಡೆದ ಹಣಕ್ಕೆ ಬೋಗಸ್‌ ಚೆಕ್‌ ನೀಡಿದ್ದಾರೆ.

೬ ತಿಂಗಳ ಹಿಂದೆ ಪಟ್ಟಣದಲ್ಲಿ ಲಕ್ಷ್ಮೀ ಎಂಟರ್‌ಪ್ರೈಸಸ್ ಹೆಸರಿನಲ್ಲಿ ನಕಲಿ ಶಾಖೆಯೊಂದನ್ನು ತೆರೆದು ಗ್ರಾಮೀಣ ಭಾಗದ ಅವಿದ್ಯಾವಂತರಿಗೆ ಸ್ವ ಉದ್ಯೋಗ ಮಾಡಲು ಸಬ್ಸಿಡಿ ದರದಲ್ಲಿ ಬ್ಯಾಕುಗಳಿಂದ ಸಾಲ ಸೌಲಭ್ಯ ಕೊಡಿಸುತ್ತೇವೆ. ಇದಕ್ಕಾಗಿ ನೀವು ಮೊದಲು ಮುಂಗಡವಾಗಿ ನಮ್ಮ ಕಂಪನಿಗೆ ₹ ೨೫ ಸಾವಿರ ಹಣ ನೀಡಬೇಕು. ಸಾಲ ಪಡೆದ ನಂತರ ನಿಮ್ಮ ಹಣ ನಿಮಗೆ ವಾಪಸ್ ಕೊಡುತ್ತೇವೆ. ನೀವು ಕೊಟ್ಟ ಹಣದ ಭದ್ರತೆಗೆ ಅದೇ ಮೊತ್ತದ ಚೆಕ್‌ ನೀಡುತ್ತೇವೆ ಎಂದು ಹೇಳಿದ್ದಾರೆ.

ಹೀಗೆ ಸಾವಿರಾರು ಜನರಿಗೆ ಮೋಸದ ಚೆಕ್ ನೀಡಿದ ಕಂಪನಿಯ ಮಾಲೀಕ, ಕಳೆದ ಒಂದು ವಾರದಿಂದ ಶಾಖೆಗೆ ಬೀಗ ಜಡಿದು ಪರಾರಿಯಾಗಿದ್ದಾನೆ. ಕಂಪನಿಯ ಮಾಲೀಕ ನೀಡಿದ ಮೊಬೈಲ್‌ಗೆ ಕರೆ ಮಾಡಿದರೆ ಪೋನ್ ಸ್ವಿಚ್ ಆಫ್ ಎನ್ನುವ ಉತ್ತರ ಕೇಳಿ ಬರುತ್ತಿದೆ.

ಈ ಕುರಿತು ಪಟ್ಟಣದ ಪೊಲೀಸ್ ಠಾಣೆಗೆ ದೂರ ಸಲ್ಲಿಸಲು ಹೋದರೆ, ನಿಮ್ಮ ಹೆಸರು, ವಿಳಾಸ ಹಾಗೂ ನೀಡಿದ ಹಣದ ಕುರಿತು ಬರೆದುಕೊಡಿ, ನಾವು ವಿಚಾರಣೆ ಮಾಡುತ್ತೇವೆ ಎಂದು ಹೇಳಿ ಸಾಗಹಾಕಿದ್ದಾರೆ ಎಂದು ಅಕ್ಕಿಗುಂದ ತಾಂಡಾದ ಶ್ರೀಕಾಂತ ಲಮಾಣಿ ಹಾಗೂ ರೇಣುಕಾ ಯಲ್ಲಪ್ಪ ಮಡಿವಾಳರ ದೂರಿದರು.

ಲಕ್ಷ್ಮೀ ಎಂಟರ್‌ಪ್ರೈಸಸ್ ಎನ್ನುವ ಕಂಪನಿಯವರು ಗ್ರಾಮೀಣ ಭಾಗದ ಜನರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಕೊಡಿಸುತ್ತೇನೆ ಎಂದು ಹೇಳಿ ನಮ್ಮಿಂದ ₹ ೧೫, ೨೦, ೨೫ ಸಾವಿರ ಹಣ ಪಡೆದುಕೊಂಡು, ನಕಲಿ ಚೆಕ್ ನೀಡಿ ಪರಾರಿಯಾಗಿದ್ದಾರೆ. ಕಂಪನಿಯ ಮಾಲೀಕ ನೀಡಿದ ಚೆಕ್‌ನ್ನು ಬ್ಯಾಂಕಿಗೆ ತೆಗೆದುಕೊಂಡು ಹೋದರೆ, ಆ ಅಕೌಂಟ್ ಫ್ರೀಜ್‌ ಆಗಿದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ. ಸಾಲ-ಸೋಲ ಮಾಡಿ ಸಬ್ಸಿಡಿ ಸಾಲ ಸಿಗುತ್ತದೆ ಎನ್ನುವ ಆಶಯಕ್ಕೆ ಬಿದ್ದು ಹಣ ತಂದು ಕೊಟ್ಟಿದ್ದೇವೆ. ಈಗ ಕಂಪನಿ ಮಾಲೀಕ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಇದರಿಂದ ದಿಕ್ಕು ತೋಚದಂತಾಗಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಹೋದರೆ ನಮಗೇನೂ ಗೊತ್ತಿಲ್ಲ, ನೀವು ಕಂಪ್ಲೇಂಟ್‌ ಬರೆದು ಕೊಡಿ, ನೋಡೋಣ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸುವರ್ಣಗಿರಿ ತಾಂಡಾದ ಚಂದ್ರಕಾಂತ ಲಮಾಣಿ ಹಾಗೂ ಸುನೀತಾ ಗಣೇಶ ಲಮಾಣಿ ತಮ್ಮ ಅಳಲು ತೋಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಸಂಯುಕ್ತಾಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧೆ: ಆನಂದ ಸಿಂಗ್
ಗ್ರಾಹಕರ ಅನುಕೂಲಕ್ಕಾಗಿ ಬಿಡಿಸಿಸಿ ನೂತನ ಶಾಖೆ ಆರಂಭ